ADVERTISEMENT

ಬೆಳಗಾವಿ ಅಧಿವೇಶನ: ‍ಪೂರ್ವ ಸಿದ್ಧತೆ ಪರಿಶೀಲಿಸಿದ ಆಡಳಿತ ಸುಧಾರಣೆ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 10:54 IST
Last Updated 1 ಡಿಸೆಂಬರ್ 2021, 10:54 IST
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಪಿ.ಹೇಮಲತಾ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಪಿ.ಹೇಮಲತಾ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದರು.   

ಬೆಳಗಾವಿ: ಇದೇ 13ರಿಂದ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಆರಂಭಗೊಳ್ಳಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೆ ನಡೆದಿರುವ ಪೂರ್ವ ಸಿದ್ಧತೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಪಿ.ಹೇಮಲತಾ ಬುಧವಾರ ಪರಿಶೀಲಿಸಿದರು.

ವಿಧಾನಸಭೆ, ಸಭಾಧ್ಯಕ್ಷರ ಕೊಠಡಿ, ಬ್ಯಾಂಕ್ವೆಟ್ ಸಭಾಂಗಣ, ಶಾಸಕರು ಹಾಗೂ ವಿರೋಧ ಪಕ್ಷದ ಮೊಗಸಾಲೆ, ಸೆಂಟ್ರಲ್ ಹಾಲ್, ಊಟದ ವ್ಯವಸ್ಥೆ, ಭದ್ರತಾ ವ್ಯವಸ್ಥೆಯನ್ನು, ಕಾರ್ಯದರ್ಶಿಗಳ ಕ್ಯುಬಿಕಲ್‌ಗಳನ್ನು ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ದಟ್ಟಣೆ ನಿಯಂತ್ರಿಸಲು ಊಟದ ಸಮಯವನ್ನು ಹೆಚ್ಚಿಗೆ ಕಲ್ಪಿಸಬೇಕು. ಆದಷ್ಟು ಬೇಗನೆ ಊಟದ ವ್ಯವಸ್ಥೆ ಆರಂಭಿಸಿದರೆ ಅನುಕೂಲ ಆಗುತ್ತದೆ. ಈ ಬಗ್ಗೆ ಪರಿಶೀಲಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಆರ್.ಟಿ.ಪಿ.ಸಿ.ಆರ್. ವರದಿ ಕಡ್ಡಾಯಗೊಳಿಸಿದಾಗ ಜನಪ್ರತಿನಿಧಿಗಳಿಗೆ ಪರೀಕ್ಷೆಗೆ ಅನುಕೂಲ ಕಲ್ಪಿಸುವ ಬಗ್ಗೆ ಅಧಿಕಾರಿಗಳು ಮುಂಚಿತವಾಗಿ ಪರಿಶೀಲಿಸಬೇಕು’ ಎಂದು ತಿಳಿಸಿದರು.

ಸುವರ್ಣ ವಿಧಾನಸೌಧದಲ್ಲಿ ಕಾರ್ಯಾರಂಭಿಸಿರುವ ಕಚೇರಿಗಳಿಗೆ ಅಧಿವೇಶನ ಮುಕ್ತಾಯದವರೆಗೆ ನೆಲಮಹಡಿಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿರುವುದನ್ನು ಕೂಡ ಅವರು ವೀಕ್ಷಿಸಿದರು.

‘ಪ್ರತಿ ವರ್ಷದಂತೆ ಸಚಿವರು, ಶಾಸಕರಿಗೆ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಊಟದ ವ್ಯವಸ್ಥೆ ಮಾಡಲಾಗುವುದು. ಬಫೆಟ್ ಹಾಲ್‌ನಲ್ಲಿ ಸಚಿವಾಲಯದ ಅಧಿಕಾರಿಗಳು/ಸಿಬ್ಬಂದಿ, ಮಾರ್ಷಲ್‌ಗಳು ಹಾಗೂ ಮಾಧ್ಯಮದವರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ವಿವರಿಸಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವಕುಮಾರ್ ಹುಲಕಾಯಿ ಸಿದ್ಧತೆಯ ಮಾಹಿತಿ ನೀಡಿದರು.

ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಅಧಿವೇಶನದ ವಿಶೇಷಾಧಿಕಾರಿ ಸುರೇಶ ಇಟ್ನಾಳ, ‌ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಕ್ಯಾಳ, ಎಎಸ್ಪಿ ಅಮರನಾಥ ರೆಡ್ಡಿ, ಹೆಚ್ಚುವರಿ ಪ್ರಾದೇಶಿಕ ಆಯುಕ್ಷೆ ಗೀತಾ ಕೌಲಗಿ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಕೊಡ್ಲಿ, ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಶೋಭಾ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.