ಬೆಂಗಳೂರು: ಮದ್ಯ ಮಾರಾಟದಿಂದ 2025–26ನೇ ಸಾಲಿನಲ್ಲಿ ₹40,000 ಕೋಟಿ ಆದಾಯ ನಿರೀಕ್ಷೆ ಇದ್ದು, ಇದೇ ಆಗಸ್ಟ್ ವೇಳೆಗೆ ₹16,358.76 ಕೋಟಿ ಸಂಗ್ರಹಿಸುವ ಮೂಲಕ ಶೇ 40ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಎರಡು ತ್ರೈಮಾಸಿಕದಲ್ಲಿ ₹16,290 ಕೋಟಿ ಆದಾಯದ ನಿರೀಕ್ಷೆ ಇತ್ತು. ₹16,358 ಕೋಟಿ ಆದಾಯ ಬಂದಿದ್ದು, ನಿರೀಕ್ಷೆಗಿಂತ ₹68.78 ಕೋಟಿ ಹೆಚ್ಚುವರಿ ಸಂಗ್ರಹವಾಗಿದೆ. ಡಿಜಿಟಲ್ ವ್ಯವಸ್ಥೆ ಜಾರಿಗೆ ತಂದಿದ್ದು, 5 ವರ್ಷಗಳಿಗೆ ಒಮ್ಮೆ ಆನ್‌ಲೈನ್ ಮೂಲಕ ಪರವಾನಗಿ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಸಿಎಲ್–7 ಪರವಾನಗಿ ನೀಡುವ ಹಂತ ಕಡಿತಗೊಳಿಸಲಾಗಿದೆ ಎಂದರು.
‘ತೆರಿಗೆ ಸಂಗ್ರಹ, ಇಲಾಖೆಯ ಕೆಲಸಗಳಲ್ಲಿ ನಿರ್ಲಕ್ಷ್ಯ ತೋರಿದ ‘ಎ’ ವೃಂದದ 31, ‘ಬಿ’ ವೃಂದದ 20 ಹಾಗೂ 43 ಅಬಕಾರಿ ಸಬ್‌ಇನ್‌ಸ್ಪೆಕ್ಟರ್‌ಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಲಾಗಿದೆ. ಆಡಳಿತ ಸುಧಾರಣಾ ಆಯೋಗ ನೀಡಿದ ಶಿಫಾರಸುಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುತ್ತಿದೆ. 62 ಶಿಫಾರಸುಗಳಲ್ಲಿ ಶೇ 95 ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರಲು ಆದೇಶ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಮಾದಕ ದ್ರವ್ಯ ಪದಾರ್ಥಗಳ ನಿಯಂತ್ರಣದ ಬಗ್ಗೆ ಸಾಕಷ್ಟು ಕ್ರಮವಹಿಸಬೇಕು. ಸಣ್ಣ ಪ್ಯಾಕೇಟ್‌ನಲ್ಲಿ ಸಿಎಚ್ ಪೌಡರ್ ತಂದು, ನೂರಾರು ಲೀಟರ್ ಮದ್ಯ ತಯಾರಿಸುವವರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ಕೈಗೊಳ್ಳಬೇಕು. ಎನ್‌ಡಿಪಿಎಸ್ ಕಾಯ್ದೆಯನ್ನು ಪರಿಣಾಮವಾಗಿ ಜಾರಿಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಅಕ್ರಮ ಮಾರಾಟ, ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ 93,751 ಲೀಟರ್ ಮದ್ಯ, 13,453 ಲೀಟರ್ ಸೇಂದಿ, 4,257 ಲೀಟರ್ ಕಳ್ಳಬಟ್ಟಿ, 7,503 ಲೀಟರ್ ಬೆಲ್ಲದ ಕೊಳೆ ವಶಕ್ಕೆ ಪಡೆಯಲಾಗಿದೆ ಎಂದರು.
ಮಹಾರಾಷ್ಟ್ರ ಗೋವಾದಿಂದ ಅಕ್ರಮ ಮದ್ಯ ಸಾಗಣೆ ಮೇಲೆ ನಿಗಾವಹಿಸಲು ಗಡಿ ಚೆಕ್‌ಪೋಸ್ಟ್ ಸಿಬ್ಬಂದಿಯನ್ನು 15 ದಿನಗಳಿಗೊಮ್ಮೆ ಬದಲಿಸುತ್ತಿರುವಂತೆ ಆಯುಕ್ತರಿಗೆ ಸೂಚಿಸಲಾಗಿದೆಆರ್.ಬಿ. ತಿಮ್ಮಾಪುರ ಅಬಕಾರಿ ಸಚಿವ
ಎಂಎಸ್‌ಐಎಲ್‌ಗಿಲ್ಲ ಹೊಸ ಪರವಾನಗಿ
ಎಂಎಸ್‌ಐಎಲ್‌ಗೆ ಇನ್ನು ಮುಂದೆ ಮದ್ಯದ ಮಳಿಗೆ ತೆರೆಯಲು ಹೊಸ ಪರವಾನಗಿ ನೀಡುವುದಿಲ್ಲ. ಎಂಎಸ್‌ಐಎಲ್ ಸೇರಿದಂತೆ ನಿಷ್ಕ್ರಿಯವಾಗಿರುವ ಪರವಾನಗಿಗಳನ್ನು ಹರಾಜು ಹಾಕಲಾಗುವುದು ಎಂದು ತಿಮ್ಮಾಪುರ ಹೇಳಿದರು. ಕಳೆದ ಐದು ತಿಂಗಳಲ್ಲಿ ಬಿಯರ್ ಮಾರಾಟದಲ್ಲಿ ಕುಸಿತವಾಗಿದೆ. ಐಎಂಎಲ್ ಮಾರಾಟದಲ್ಲಿ ಏರಿಕೆಯಾಗಿದೆ. 285 ಲಕ್ಷ ಲೀಟರ್ ಐಎಂಎಲ್ ಮಾರಾಟವಾದರೆ 164 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಕಳೆದ ಸಾಲಿಗಿಂತ 43 ಲಕ್ಷ ಲೀಟರ್ ಬಿಯರ್ ಕಡಿಮೆ 4 ಲಕ್ಷ ಲೀಟರ್ ಹೆಚ್ಚು ಐಎಂಎಲ್ ಮಾರಾಟವಾಗಿದೆ. ಪ್ರೀಮಿಯಂ ಮದ್ಯ ಮಾರಾಟ ದರ ತುಸು ಹೆಚ್ಚಿದ್ದು ದರ ಪರಿಷ್ಕರಣೆ ಕುರಿತು ಚಿಂತನೆ ನಡೆಸಲಾಗುವುದು ಎಂದು ವಿವರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.