ಕರ್ನಾಟಕ ಲೋಕಾಯುಕ್ತ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಸಚಿವರಾದ ಕೆ.ಎಚ್. ಮುನಿಯಪ್ಪ, ದಿನೇಶ್ ಗುಂಡೂರಾವ್, ಬಿ.ಝೆಡ್. ಜಮೀರ್ ಅಹಮದ್ ಖಾನ್, ರಹೀಂ ಖಾನ್, ಕೆ.ವೆಂಕಟೇಶ್ ಸೇರಿ ವಿಧಾನಸಭೆಯ 66 ಮತ್ತು ವಿಧಾನ ಪರಿಷತ್‌ನ 28 ಸದಸ್ಯರು ನಿಗದಿತ ಗಡುವು ಮುಗಿದರೂ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ.
2024–25ನೇ ಸಾಲಿನ ಆಸ್ತಿ ಮತ್ತು ಋಣ ಬಾಧ್ಯತೆಯ ವಿವರಗಳನ್ನು ಸಲ್ಲಿಸದ ಚುನಾಯಿತ ಪ್ರತಿನಿಧಿಗಳ ಪಟ್ಟಿಯನ್ನು ಕರ್ನಾಟಕ ಲೋಕಾಯುಕ್ತ ಬಿಡುಗಡೆ ಮಾಡಿದೆ. ಅವಧಿ ಮುಗಿದರೂ 2024–25ರ ಅವಧಿಯ ಆಸ್ತಿ ವಿವರ ಸಲ್ಲಿಸದ ಶಾಸಕರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಗಡುವು ಮುಗಿದ ಬಳಿಕ ಸಚಿವ ಡಿ.ಸುಧಾಕರ್, ಮೂವರು ಶಾಸಕರು ಹಾಗೂ ವಿಧಾನ ಪರಿಷತ್‌ನ ಸದಸ್ಯರೊಬ್ಬರು ಆಸ್ತಿ ವಿವರ ಸಲ್ಲಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಪ್ರಕಾರ, ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಎಲ್ಲ ಸದಸ್ಯರು ಪ್ರತಿ ವರ್ಷ ಜೂನ್ 30ರೊಳಗೆ ತಮ್ಮ ಆಸ್ತಿ ಹಾಗೂ ಸಾಲದ ವಿವರಗಳ ಪ್ರಮಾಣಪತ್ರ ಸಲ್ಲಿಸಬೇಕು. ಆದರೆ, ಹಲವರು ಆಸ್ತಿ ವಿವರದ ಪ್ರಮಾಣಪತ್ರ ಸಲ್ಲಿಸಿಲ್ಲ. ಇತ್ತೀಚೆಗೆ ನಿಧನರಾದ ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಸಹ ಆಸ್ತಿ ವಿವರಕ್ಕೆ ಸಂಬಂಧಿಸಿದ ದಾಖಲೆ ನೀಡಿರಲಿಲ್ಲ.
ಲೋಕಾಯುಕ್ತ ಸಂಸ್ಥೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ, ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ಅವರ ಹೆಸರುಗಳೂ ಇವೆ.
ಈ ಪಟ್ಟಿಯಲ್ಲಿ ಕಾಂಗ್ರೆಸ್ ಪ್ರತಿನಿಧಿಸುವ ಶಾಸಕರಾದ, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ ರಾಯರಡ್ಡಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಮಾಜಿ ಸಚಿವ ಕೆ.ಎನ್. ರಾಜಣ್ಣ, ಸತೀಶ್ ಸೈಲ್, ಟಿ.ಡಿ.ರಾಜೇಗೌಡ, ಸಿ.ಪುಟ್ಟರಂಗ ಶೆಟ್ಟಿ, ಕೆ.ಎಂ.ಉದಯ್, ಕೆ.ಎಚ್. ಪುಟ್ಟಸ್ವಾಮಿಗೌಡ, ಸಿ.ಪಿ. ಯೋಗೇಶ್ವರ, ಡಾ.ಎಚ್.ಡಿ. ರಂಗನಾಥ್, ಎಸ್.ಎನ್. ಸುಬ್ಬಾರೆಡ್ಡಿ, ಕೆ.ಎಂ.ರೂಪಕಲಾ, ಕೆ. ಗೋವಿಂದರಾಜು ಅವರ ಹೆಸರುಗಳಿವೆ.
ಬಿಜೆಪಿಯ ಜಿ. ಜನಾರ್ದನ ರೆಡ್ಡಿ, ಎಚ್.ವಿಶ್ವನಾಥ್, ಎಂ.ಟಿ.ಬಿ. ನಾಗರಾಜು (ಎಂ.ಟಿ.ಬಿ), ಪ್ರದೀಪ ಶೆಟ್ಟರ್, ಜೆಡಿಎಸ್ ಶಾಸಕಾಂಗ ಪಕ್ಷ ನಾಯಕರಾದ ಸಿ.ಬಿ.ಸುರೇಶ್ ಬಾಬು, ಶಾಸಕರಾದ ಎಚ್.ಡಿ. ರೇವಣ್ಣ, ಎ.ಮಂಜು, ಸಿ.ಎನ್. ಬಾಲಕೃಷ್ಣ ಅವರು ಪಟ್ಟಿಯಲ್ಲಿದ್ದಾರೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22ರ ಪ್ರಕಾರ, ‘ಪ್ರತಿಯೊಬ್ಬ ಸಾರ್ವಜನಿಕ ಸೇವಕನು ಪ್ರತಿ ವರ್ಷ ಜೂನ್ 30ರೊಳಗೆ ಆಸ್ತಿ ಮತ್ತು ಋಣ ಬಾಧ್ಯತೆಯ ವಿವರಗಳನ್ನು ಸಲ್ಲಿಸಬೇಕು. ಪ್ರಮಾಣಪತ್ರ ಸಲ್ಲಿಸಲು ವಿಫಲರಾದ ಸಾರ್ವಜನಿಕ ಸೇವಕರಿಗೆ ಸಂಬಂಧಿಸಿದಂತೆ ಲೋಕಾಯುಕ್ತರು ಸಕ್ಷಮ ಪ್ರಾಧಿಕಾರಿಯಾಗಿರುವ ರಾಜ್ಯಪಾಲರಿಗೆ ವರದಿ ಸಲ್ಲಿಸಬೇಕು. ಅಂತಹ ಶಾಸಕರ ಹೆಸರುಗಳನ್ನು ರಾಜ್ಯದಾದ್ಯಂತ ಪ್ರಸರಣ ಹೊಂದಿರುವ ಮೂರು ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕು’ ಎಂದು ಹೇಳಲಾಗಿದೆ.
ಆಸ್ತಿ ವಿವರ ಸಲ್ಲಿಸದ ಜನ ಪ್ರತಿನಿಧಿಗಳ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.