ADVERTISEMENT

ಶಿವಸೇನೆ ಸಂಸದ ಧೈರ್ಯಶೀಲ ಮಾನೆಗೆ ಬೆಳಗಾವಿ ಪ್ರವೇಶ ನಿಷೇಧ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 1:12 IST
Last Updated 19 ಡಿಸೆಂಬರ್ 2022, 1:12 IST
ಧೈರ್ಯಶೀಲ ಮಾನೆ
ಧೈರ್ಯಶೀಲ ಮಾನೆ   

ಬೆಳಗಾವಿ: ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ ಮಾನೆ ಅವರು ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಭಾನುವಾರ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಡಿ.19ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಇದೇ ದಿನ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ಮಹಾ ಮೇಳಾವ್‌ ಆಯೋಜಿಸಿದೆ. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಜನರ ಆಸ್ತಿ–ಪಾಸ್ತಿ– ಪ್ರಾಣ ಹಾನಿ ತಪ್ಪಿಸುವ ಉದ್ದೇಶದಿಂದ ಸಿಆರ್‌ಪಿಸಿ ಕಲಂ 144 (3) ಅನ್ವಯ ನಿಷೇಧ ಹೇರಿದ್ದಾರೆ.

ಡಿ.6ರಂದು ಕೂಡ ಧೈರ್ಯಶೀಲ ಮಾನೆ, ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ, ರಾಜೇಸಾಬ್‌ ದೇಸಾಯಿ ಅವರ ಪ್ರವೇಶ ನಿಷೇಧಿಸಲಾಗಿತ್ತು.

ADVERTISEMENT

ಮೇಳಾವ್‌ ಮಾಡಿಯೇ ಸಿದ್ಧ:‘ಮರಾಠಿಗರ ಮಹಾ ಮೇಳಾವ್ ವಿಫಲಗೊಳಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಮಹಾರಾಷ್ಟ್ರದಿಂದ ಯಾರೂ ಬರದಂತೆ ತಡೆಯುತ್ತಿದೆ. ಏನೇ ಕಸರತ್ತು ಮಾಡಿದರೂ ಸಮಾವೇಶ ಮಾಡುತ್ತೇವೆ. ನಮ್ಮ ಹಕ್ಕಿಗೆ ಹೋರಾಡುವುದು ತಪ್ಪಲ್ಲ’ ಎಂದು ಎಂಇಎಸ್‌ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.

‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದ ಕಾರಣ, ಈ ಬಾರಿ ಬೃಹತ್‌ ಮಟ್ಟದಲ್ಲಿ ಮಹಾ ಮೇಳಾವ್ ಆಯೋಜನೆಗೆ ಎಂಇಎಸ್‌ ಸಿದ್ಧತೆ ನಡೆಸಿತ್ತು. ಆದರೆ, ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಮಧ್ಯಸ್ಥಿಕೆಯಿಂದಾಗಿ ಎಂಇಎಸ್‌, ಶಿವಸೇನೆ ಹಾಗೂ ಮಹಾರಾಷ್ಟ್ರದ ಬಿಜೆಪಿ ಮುಖಂಡರು ಸಂದಿಗ್ಧಕ್ಕೆ ಸಿಲುಕಿದ್ದೇವೆ’ ಎಂದೂ ಎಂಇಎಸ್‌ ಮುಖಂಡರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.