ADVERTISEMENT

ಇನ್ಮುಂದೆ ಆನ್‌ಲೈನ್‌ನಲ್ಲಿ ಮಾವು; ಫ್ಲಿಪ್ ಕಾರ್ಟ್ ಮೂಲಕ ಮಾವು ಮಾರಾಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 12:11 IST
Last Updated 26 ಮೇ 2020, 12:11 IST
ಫ್ಲಿಪ್‌ಕಾರ್ಟ್
ಫ್ಲಿಪ್‌ಕಾರ್ಟ್   

ಬೆಂಗಳೂರು: ಬೆಳೆಗಾರನೇ ಬೆಲೆ ನಿಗದಿ ಮಾಡುತ್ತಾನೆ. ಇತಿಹಾಸದಲ್ಲೆ ಮೊದಲ ಬಾರಿಗೆ ತತ್ವ ಇಂತಹ ಅವಕಾಶವನ್ನು ರೈತರಿಗೆ ಒದಗಿಸಲಾಗಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ದರ ನಿಗದಿ ಮಾಡಲಾಗುತ್ತಿತ್ತು. ಈಗ ಆನ್‌ಲೈನ್‌ನಲ್ಲಿ ಮಾವು ಮಾರಾಟ ಆರಂಭಿಸಲಾಗಿದ್ದು, ದರವನ್ನು ಮಾವು ಬೆಳೆಗಾರನೇ ನಿಗದಿ ಮಾಡುತ್ತಾನೆ. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ಹೇಳಿದ್ದಾರೆ.

ವಿಕಾಸ ಸೌಧದಲ್ಲಿ ಫ್ಲಿಪ್ ಕಾರ್ಟ್ ಸಹಯೋಗದಲ್ಲಿ ಆನ್‌ಲೈನ್‌ ಮೂಲಕ ಮಾವು ಮಾರಾಟಕ್ಕೆ ಸಚಿವರು ಚಾಲನೆ ನೀಡಿದರು‌.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಆನ್‌ಲೈನ್‌ ಮೂಲಕ ಮಾವು ಮಾರಾಟ ಆರಂಭಿಸಿದ್ದೇವೆ. ಇದು ಪ್ರಾಯೋಗಿಕ. ಇದರಲ್ಲಿ ಇರುವ ನೂನ್ಯತೆ ಸರಿಪಡಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತೋತ್ಪನ್ನವನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡುವ ಪ್ರಯತ್ನ ಮಾಡಲಾಗುವುದು. ಈಗ ಮಾವು ಮಾರಾಟ ಶುರುವಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಮಾವು ಖರೀದಿ ಮಾಡಬಹುದು. ಆದರೆ ದರ ನಿಗದಿ ಮಾಡುವ ಹಕ್ಕು ಮಾವು ಬೆಳೆಗಾರನದ್ದೇ ಆಗಿದೆ‌. ಮದ್ಯವರ್ತಿಗಳಿಗೆ ಅವಕಾಶ ಇಲ್ಲ. ಇಲ್ಲಿ ಬೆಳೆಗಾರ ನಿಗದಿ ಮಾಡಿದ್ದೇ ದರ ಎಂದು ಸಚಿವರು ಹೇಳಿದ್ದಾರೆ‌.

ADVERTISEMENT

ಫಾರ್ಮರ್ ಪ್ರೊಡ್ಯುಸ್ ಆರ್ಗನೈಸೇಶನ್‌ನಲ್ಲಿ (FPO) ಮಾವು ಬೆಳೆಗಾರರು ಹೆಸರು ನೊಂದಾಯಿಸಿಕೊಳ್ಳಬೇಕು. ನೊಂದಾಯಿತ ರೈತರ ಹೆಸರನ್ನು ಫ್ಲಿಪ್‌ಕಾರ್ಟ್‌ನವರು ಪಡೆದುಕೊಳ್ಳುತ್ತಾರೆ. ಗ್ರಾಹಕರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದಾಗ, ಸಂಬಂಧಿಸಿದ ತಳಿಯ ಮಾವನ್ನು ರೈತರಿಂದ ಪಡೆದು ಗ್ರಾಹಕರಿಗೆ ಫ್ಲಿಪ್ ಕಾರ್ಟ್ ನೀಡಲಿದೆ.

ಈಗ ಫ್ಲಿಪ್‌ಕಾರ್ಟ್ ಮಾತ್ರ ಈ ಸೇವೆ ನೀಡಲು ಮುಂದಾಗಿದೆ‌. ಕೆಲ ದಿನಗಳ ಬಳಿಕ ಇತರ ಆನ್‌ಲೈನ್‌ ಮಾರಾಟ ಸಂಸ್ಥೆ ಮೂಲಕವೂ ಈ ಕಾರ್ಯ ಆರಂಭವಾಗಲಿದೆ. ರೈತರಿಗೆ ಅನುಕೂಲ ಆಗುವಂತ ಮಾರುಕಟ್ಟೆ ನಿರ್ಮಿಸುವ ಬಗ್ಗೆಯೂ ಚಿಂತನೆ ಇದೆ. ಕೃಷಿ ಉತ್ಪನ್ನ ಹಾಳಾಗದಂತೆ ನೋಡಿಕೊಳ್ಳಲು ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.