ADVERTISEMENT

ರೈತರ ಆದಾಯ ಹೆಚ್ಚಿಸುವ ಕಾಯ್ದೆ: ಬಿ.ಸಿ.ಪಾಟೀಲ, ಎಸ್‌.ಟಿ.ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 8:58 IST
Last Updated 22 ಸೆಪ್ಟೆಂಬರ್ 2020, 8:58 IST
ಕೃಷಿ ಸಚಿವ ಬಿ.ಸಿ.ಪಾಟೀಲ
ಕೃಷಿ ಸಚಿವ ಬಿ.ಸಿ.ಪಾಟೀಲ   

ಬೆಂಗಳೂರು: ರೈತ ತನ್ನ ಬೆಳೆಯನ್ನು ಎಲ್ಲಿ ಬೇಕಾದರೂ, ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಇದರಿಂದ ರೈತರಿಗೆ ಸ್ವಾತಂತ್ರ್ಯ ಸಿಗುತ್ತದೆ ಮತ್ತು ಎಲ್ಲ ರೀತಿಯ ಮಧ್ಯವರ್ತಿಗಳಿಂದ ಮುಕ್ತರಾಗುತ್ತಾರೆ ಎಂದು ಬಿಜೆಪಿ ಹೇಳಿದೆ.

ವಿಧಾನಸೌಧದಲ್ಲಿ ಮಂಗಳವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಅವರು ಕೃಷಿಕರ ಪರವಾದ ಮಸೂದೆಗಳಿಗೆ ಸಂಸತ್ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರ ಕೃಷಿಕರ ಪರವಾದ ನೈಜ ಕಾಳಜಿಯಿಂದ ಮಸೂದೆಗಳನ್ನು ಮಂಡಿಸಿದೆ. ಇದು ಐತಿಹಾಸಿಕ. ಇದರಿಂದ ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ತಾವು ಬೆಳೆದ ಉತ್ಪನ್ನಗಳನ್ನು ಮನೆ ಬಾಗಿಲಲ್ಲೇ ಮಾರಾಟ ಮಾಡಲು ಅವಕಾಶ ಇದೆ. ತನಗೆ ಸರಿಕಂಡ ಉತ್ತಮ ಬೆಲೆಗೆ ಮಾರಬಹುದು. ಖಾಸಗಿವರಿಗೆ ಮಾರಾಟ ಮಾಡಲು ಇಷ್ಟವಿಲ್ಲದಿದ್ದರೆ ಎಪಿಎಂಸಿಗೆ ಒಯ್ದು ಮಾರಲೂ ಅವಕಾಶವಿದೆ. ರೈತ ತನ್ನ ಇಚ್ಛೆಗೆ ಅನುಗುಣವಾಗಿ ಮಾರಬಹುದು ಎಂದು ಹೇಳಿದರು.

ADVERTISEMENT

ಅಕಾಲಿದಳ ವಿರೋಧ ವ್ಯಕ್ತಪಡಿಸಿದ್ದು, ಅದು ಆ ಪಕ್ಷದ ವೈಯಕ್ತಿಕ ನಿರ್ಧಾರವಾಗಿದೆ. ಆದರೆ, ರೈತರ ಹಿತ ಬಯಸುವವರು ಈ ಮಸೂದೆಯನ್ನು ವಿರೋಧಿಸುವುದಿಲ್ಲ ಎಂದು ಪಾಟೀಲ ತಿಳಿಸಿದರು.

ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಮಾತನಾಡಿ, ನಾನು 26 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಎಪಿಎಂಸಿ ಕಾಯ್ದೆಯ ತಿದ್ದುಪಡಿ ಯಾವುದೇ ರೈತರು ವಿರೋಧ ವ್ಯಕ್ತಪಡಿಸಿಲ್ಲ. ರೈತ ತನ್ನ ಬೆಳೆಯನ್ನು ತಾನು ಮಾರಾಟ ಮಾಡುವ ಹಕ್ಕನ್ನು ಮೊದಲ ಬಾರಿಗೆ ಪಡೆದಿದ್ದಾನೆ. ಮೊದಲಿದ್ದ ನಿಯಮ ಬದಲಿಸಿದ್ದರಿಂದ ಮಧ್ಯವರ್ತಿಗಳು ದರ ನಿಗದಿ ಮಾಡುವುದು ತಪ್ಪಲಿದೆ. ಇದರಿಂದ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಲಿದೆ. ಎಪಿಎಂಸಿ ಸೆಸ್‌ ಅನ್ನು ರೈತರಿಗಾಗಿ ಸರ್ಕಾರ ಕಡಿಮೆ ಮಾಡಿದೆ ಎಂದು ಹೇಳಿದರು.

ಹೊಸ ಕಾನೂನು ಜಾರಿ ಆದ ಮೇಲೆ ರೈತನ ಹೊಲಕ್ಕೆ ಹೋಗಿ ಕೃಷಿ ಉತ್ಪನ್ನ ಖರೀದಿಸಬಹುದು. ಈಗ ಸಿಗುತ್ತಿರುವ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಲಾಭಗಳಿಸಲು ಸಾಧ್ಯವಿದೆ. ಯಾವುದೇ ಕಂಪನಿ ರೈತರ ಮೇಲೆ ಸವಾರಿ ಮಾಡಲು ಅಥವಾ ಕಾರ್ಪೊರೇಟ್‌ ಕಂಪನಿಗಳು ರೈತನನ್ನು ಅಡಿಯಾಳು ಮಾಡಿಕೊಳ್ಳಲು ಸಾಧ್ಯವಿಲ್ಲ. ವಿರೋಧ ಪಕ್ಷಗಳು ಮತ್ತು ಕೆಲವು ಸಂಘಟನೆಗಳು ರಾಜಕೀಯಕ್ಕಾಗಿ ಮಾತ್ರ ವಿರೋಧಿಸುತ್ತಿವೆ ಎಂದರು.

ರೈತ ತನ್ನ ಬೆಳೆಯನ್ನು ಹೆಚ್ಚು ಬೆಲೆಗೆ ಬಹುರಾಷ್ಟ್ರೀಯ ಕಂಪನಿಗೆ ಮಾರಿದರೆ ತಪ್ಪೇನು? ಮಾರಾಟ ಮಾಡಲಿ. ಒಟ್ಟಿನಲ್ಲಿ ರೈತನ ಬೆಳೆಗೆ ಹೆಚ್ಚಿನ ಬೆಲೆ ಸಿಗಬೇಕು. ಆತನ ಆದಾಯ ಹೆಚ್ಚಾಗಿ ಬದುಕು ಹಸನಾಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದರು.

ಯಾವುದೇ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡಿಲ್ಲ. ರಾಜ್ಯದಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದಾಗ ಯಾರೂ ವಿರೋಧ ಮಾಡಲಿಲ್ಲ. ಪ್ರತಿಭಟನಕಾರರನ್ನು ಸ್ಪಂದಿಸಲು ಮುಖ್ಯಮಂತ್ರಿ ಸದಾ ಸಿದ್ಧರಿದ್ದಾರೆ ಎಂದು ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ರೈತರಿಗೆ ಎಪಿಎಂಸಿಗೆ ಹೋಗಿ ಮಾರಾಟ ಮಾಡುವ ಸೀಮಿತ ಕಾಲಾವಧಿಯನ್ನು ವಿಸ್ತರಿಸಿ ಮಾರಾಟದ ಅವಕಾಶವನ್ನು ವಿಸ್ತರಿಸಲಾಗಿದೆ. ಲೋಡಿಂಗ್ ಅನ್ಲೋಡಿಂಗ್, ಹಮಾಲಿ ಕೂಲಿ ಖರ್ಚು ಕಡಿಮೆಯಾಗಲಿದೆ ಎಂದು ಹೇಳಿದರು.

ಈ ಕಾಯಿದೆಯಿಂದ ಮಧ್ಯವರ್ತಿಗಳಿಗಷ್ಟೆ ತೊಂದರೆ. ಇವರ ಜತೆ ಕೈಜೋಡಿಸಿದವರಿಗೆ ತೊಂದರೆ ಆಗಿದೆ. ಈಗ ನಡೆಯುತ್ತಿರುವ ಪ್ರತಿಭಟನೆ ನಿಜವಾದ ರೈತರದ್ದಲ್ಲ. ರೈತ ಹೋರಾಟಗಾರರದ್ದು ಎಂದು ಅವರು ಹೇಳಿದರು. ರೈತ ಮೋರ್ಚಾ ಅಧ್ಯಕ್ಷ ಶಿವಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.