ADVERTISEMENT

ಸಾಲ ವಿತರಣೆಗಾಗಿ 'ಸಾಲ ಮೇಳ: ಎಸ್‌.ಟಿ.ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 10:40 IST
Last Updated 25 ಆಗಸ್ಟ್ 2020, 10:40 IST
ಸಾಲ ಮೇಳ–ಪ್ರಾತಿನಿಧಿಕ ಚಿತ್ರ
ಸಾಲ ಮೇಳ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬಡ ಮತ್ತು ಮಧ್ಯಮ ವರ್ಗದವರಿಗೆ ಎಲ್ಲ ರೀತಿಯ ಸಾಲಗಳು ಸುಲಭವಾಗಿ ಸಿಗುವಂತೆ ಮಾಡಲು ರಾಜ್ಯದಾದ್ಯಂತ ಶೀಘ್ರವೇ ಸಾಲ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಅವರು ತಿಳಿಸಿದ್ದಾರೆ.

ವಿಧಾನಸೌಧಸಲ್ಲಿ ಮಂಗಳವಾರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆವರು ಮಾತನಾಡಿ ಈ ವಿಷಯ ತಿಳಿಸಿದರು. ಬೆಳಗಾವಿ, ಕಲಬುರ್ಗಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್‌ಗಳನ್ನು ಜನಸ್ನೇಹಿ ಬ್ಯಾಂಕ್‌ಗಳನ್ನಾಗಿ ಹಾಗೂ ಬಡ ಮತ್ತು ಮಧ್ಯಮ ವರ್ಗದವರಿಗೆ ಎಲ್ಲ ರೀತಿಯ ಸಾಲ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಈಗಾಗಲೇ 1.10 ಲಕ್ಷ ರೈತರಿಗೆ ₹842 ಕೋಟಿ ಬೆಳೆಸಾಲ ವಿತರಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಗದವರಿಗೆ ಸಾಲ ವಿತರಿಸಲು ಎಲ್ಲ ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಸೋಮಶೇಖರ್‌ ತಿಳಿಸಿದರು.

ADVERTISEMENT

2019–20ನೇ ಸಾಲಿನಲ್ಲಿ 22.52 ಲಕ್ಷ ರೈತರಿಗೆ ₹13,577 ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಸಾಲ ಮರುಪಾವತಿಯೂ ಉತ್ತಮ ಪ್ರಮಾಣದಲ್ಲಿದೆ. ₹11,100 ಕೋಟಿ ಪೈಕಿ ₹10,477 ಕೋಟಿ ವಸೂಲಾಗಿದ್ದು, ₹634 ಕೋಟಿ ಬಾಕಿ ಉಳಿದಿದೆ. ಸಾಲ ವಸೂಲಾತಿ ಪ್ರಗತಿ ಶೇ 94 ರಷ್ಟಾಗಿದೆ ಎಂದು ಹೇಳಿದರು.

2020–21 ನೇ ಸಾಲಿಗೆ 24.50 ಲಕ್ಷ ರೈತರಿಗೆ ₹14,500 ಕೋಟಿ ಸಾಲ ವಿತರಿಸಲು ಉದ್ದೇಶಿಸಲಾಗಿದೆ. 4.50 ಲಕ್ಷ ಹೊಸ ಸದಸ್ಯ ರೈತರಿಗೆ ₹2,500 ಕೋಟಿ ಬೆಳೆ ಸಾಲ ವಿತರಿಸಲಾಗುವುದು. ಇದರಲ್ಲಿ 1 ಲಕ್ಷ ರೈತರಿಗೆ ₹626 ಕೋಟಿ ಬೆಳೆ ಸಾಲ ಈಗಾಗಲೇ ವಿತರಿಸಲಾಗಿದೆ ಎಂದೂ ಸೋಮಶೇಖರ್‌ ವಿವರಿಸಿದರು.

ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಶೇ 0 ಬಡ್ಡಿ ದರದಲ್ಲಿ ₹3 ಲಕ್ಷದವರೆಗೆ, ಬೆಳೆ ಸಾಲಕ್ಕೆ ಶೂನ್ಯ ಬಡ್ಡಿ ದರದಲ್ಲಿ ₹3 ಲಕ್ಷದವರೆಗೆ ಸಾಲ ವಿತರಿಸಲಾಗುವುದು ಎಂದರು.

ಕೊರೊನಾ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ತಲಾ ₹3,000ದಂತೆ 42,537 ಕಾರ್ಯಕರ್ತೆಯರ ಪೈಕಿ 41,836 ಕಾರ್ಯಕರ್ತೆಯರಿಗೆ ಪರಿಹಾರದ ಹಣ ವಿತರಿಸಲಾಗಿದೆ. ಉಳಿದ 695 ಕಾರ್ಯಕರ್ತೆಯರಿಗೆ ಶೀಘ್ರವೇ ವಿತರಿಸಲಾಗುವುದು ಎಂದೂ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.