ADVERTISEMENT

ರಮೇಶ ಜಾರಕಿಹೊಳಿ ರಾಜೀನಾಮೆ; ಬಿಜೆಪಿ ವರಿಷ್ಠರ ತಾಕೀತಿನ ಬಳಿಕ ಸಚಿವರ ಪದತ್ಯಾಗ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 20:35 IST
Last Updated 3 ಮಾರ್ಚ್ 2021, 20:35 IST
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ   

ಬೆಂಗಳೂರು: ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ಸಿಲುಕಿರುವ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಸಚಿವರು ಯುವತಿಯೊಂದಿಗೆ ಏಕಾಂತದಲ್ಲಿರುವ ವಿಡಿಯೊ ತುಣುಕುಗಳು ಮತ್ತು ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕುಗಳೊಂದಿಗೆ ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಮಂಗಳವಾರ ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪ ನಿರಾಕರಿಸಿದ್ದ ರಮೇಶ ಜಾರಕಿಹೊಳಿ, ರಾಜೀನಾಮೆ ನೀಡಲು ನಿರಾಕರಿಸಿದ್ದರು.

ಮೈಸೂರು ಪ್ರವಾಸ ಮೊಟಕುಗೊಳಿಸಿ ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ದೌಡಾಯಿಸಿದ್ದ ಸಚಿವರು, ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂದು ಮನವರಿಕೆ ಮಾಡಿಕೊಡಲು ಸಿದ್ಧತೆ ನಡೆಸಿದ್ದರು. ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರಿಗೂ ಸಮಜಾಯಿಷಿ ನೀಡಲು ಮುಂದಾಗಿದ್ದರು.

ADVERTISEMENT

ಆದರೆ, ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿಯವರ ಭೇಟಿ ಸಾಧ್ಯವಾಗಲಿಲ್ಲ. ಅವರ ಪರವಾಗಿ ಬಿಜೆಪಿ ಶಾಸಕರೂ ಆಗಿರುವ ತಮ್ಮ ಬಾಲಚಂದ್ರ ಜಾರಕಿಹೊಳಿ ಅವರು ಯಡಿಯೂರಪ್ಪ ಅವರನ್ನು ಭೇಟಿಮಾಡಿ, ರಮೇಶ ತಪ್ಪೆಸಗಿಲ್ಲ ಎಂದು ಮನವರಿಕೆ ಮಾಡಲು ಯತ್ನಿಸಿದರು. ‘ರಮೇಶ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆದಿದೆ. ಸಿಐಡಿ ಅಥವಾ ಸಿಬಿಐ ತನಿಖೆಗೆ ಆದೇಶಿಸಿ’ ಎಂದೂ ಒತ್ತಾಯಿಸಿದರು.

ಮುಖ್ಯಮಂತ್ರಿ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಾಲಚಂದ್ರ, ‘ರಮೇಶ್‌ ರಾಜೀನಾಮೆಯ ಅಗತ್ಯವಿಲ್ಲ. ಸಿ.ಡಿ ಬಿಡುಗಡೆ ಹಿಂದೆ ಪ್ರಭಾವಿಗಳ ಕೈವಾಡವಿದೆ. ವಿದೇಶದಿಂದ ಯು ಟ್ಯೂಬ್‌ನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಲಾಗಿದೆ. ಸಿ.ಡಿ ಬಿಡುಗಡೆ ಮಾಡಿರುವ ವ್ಯಕ್ತಿ ವಿರುದ್ಧ ₹100 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಲಾಗುವುದು’ ಎಂದು ಹೇಳಿಕೆ ನೀಡಿದ್ದರು.

ವರಿಷ್ಠರಿಂದ ಖಡಕ್‌ ಸೂಚನೆ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಬುಧವಾರ ಬೆಳಿಗ್ಗೆ ದೆಹಲಿಯಲ್ಲಿ ತುರ್ತು ಸಭೆ ನಡೆಸಿ ಪ್ರಕರಣದ ಕುರಿತು ಚರ್ಚಿಸಿದರು. ತಕ್ಷಣ ರಾಜೀನಾಮೆ ನೀಡುವಂತೆ ರಮೇಶ ಜಾರಕಿಹೊಳಿ ಅವರಿಗೆ ಸಂದೇಶ ರವಾನಿಸಿದರು.

ಬಳಿಕ ಬಾಲಚಂದ್ರ ಜಾರಕಿಹೊಳಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಯಡಿಯೂರಪ್ಪ, ರಮೇಶ ಅವರ ರಾಜೀನಾಮೆಗೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಬಳಿಕ ರಮೇಶ್‌ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಮುಖ್ಯಮಂತ್ರಿಗೆ ಪತ್ರ ರವಾನಿಸಿದರು. ಅದನ್ನು ಸ್ವೀಕರಿಸಿದ ಯಡಿಯೂರಪ್ಪ, ತಕ್ಷಣವೇ ರಾಜ್ಯಪಾಲರಿಗೆ ಕಳುಹಿಸಿದರು. ರಾಜ್ಯಪಾಲ ವಜುಭಾಯಿ ವಾಲಾ ಅವರು ರಮೇಶ್‌ ಅವರ ರಾಜೀನಾಮೆಯನ್ನು ಅಂಗೀಕರಿಸಿ ಅಧಿಸೂಚನೆ ಹೊರಡಿಸಿದರು.

‘ರಾಜೀನಾಮೆ ನೀಡುವ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲ. ಮತ್ತೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒತ್ತಾಯಿಸಿದ್ದಾರೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ’ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಗುರುವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಒಂದು ವೇಳೆ ರಮೇಶ ಜಾರಕಿಹೊಳಿ ರಾಜೀನಾಮೆ ನೀಡದೇ ಇದ್ದಲ್ಲಿ, ವಿರೋಧಪಕ್ಷಗಳು ಭಾರಿ ಗದ್ದಲ ಎಬ್ಬಿಸುವ ಸಾಧ್ಯತೆ ಇತ್ತು. ಅದಕ್ಕಾಗಿ ಕಾಂಗ್ರೆಸ್‌ ಪಕ್ಷ ತಯಾರಿ ನಡೆಸಿಕೊಂಡಿತ್ತು.

ಶೀಘ್ರ ತನಿಖೆಗೆ ಆಗ್ರಹ

‘ನನ್ನ ಮೇಲೆ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಈ ಬಗ್ಗೆ ಶೀಘ್ರದಲ್ಲಿ ತನಿಖೆ ಆಗಬೇಕು. ನಿರ್ದೋಷಿಯಾಗುವ ವಿಶ್ವಾಸವಿದ್ದರೂ, ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತೇನೆ’ ಎಂದು ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.