ADVERTISEMENT

29 ಮಂದಿಗೆ ಮಂತ್ರಿ ಪಟ್ಟ, ವಿಜಯೇಂದ್ರಗೆ ಸ್ಥಾನ ಇಲ್ಲ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 7:05 IST
Last Updated 4 ಆಗಸ್ಟ್ 2021, 7:05 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ    

ಬೆಂಗಳೂರು: ‘ಒಟ್ಟು 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಬೆಳಿಗ್ಗೆ ಮಾತನಾಡಿದ ಅವರು, ‘ಪಟ್ಟಿಯನ್ನು ರಾಜಭವನಕ್ಕೆ ಕಳಹಿಸಲಾಗಿದೆ’ ಎಂದರು.

‘ಈ ಬಾರಿ ಉಪ ಮುಖ್ಯಮಂತ್ರಿ ಸ್ಥಾನ ಇಲ್ಲ. ಅನುಭವ ಮತ್ತು ಹೊಸ ಶಕ್ತಿಯ ಸಮ್ಮಿಶ್ರದ ಸಚಿವ ಸಂಪುಟ ರಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಮಾರ್ಗದರ್ಶನದಲ್ಲಿ ಜನಪರ ಆಡಳಿತ ಕೊಡುವ ಹಿನ್ನೆಲೆಯಲ್ಲಿ ಮತ್ತು ಅದರ ಜೊತೆಗೆ ಬರುವ ಚುನಾವಣೆಯ ಸವಾಲು ಎದುರಿಸಲು ಸಚಿವ ಸಂಪುಟ ರಚನೆ ಆಗಿದೆ’ ಎಂದರು.

ADVERTISEMENT

ಕಿರಿಯ ಮಗ ಬಿ.ವೈ. ವಿಜಯೇಂದ್ರಗೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಆಯಕಟ್ಟಿನ ಖಾತೆಯೇ ಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪಟ್ಟು ಹಿಡಿದಿದ್ದರು. ಆದರೆ, ಉಪಮುಖ್ಯಮಂತ್ರಿ ಸ್ಥಾನ ಈ ಸಂಪುಟದಲ್ಲಿ ಇರುವುದಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಹಾಗೇ ಈಗಿನ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರೂ ಇಲ್ಲ ಎಂದು ಹೇಳಿದ್ದಾರೆ.

‘ಬರುವ ದಿನಗಳಲ್ಲಿ ರಾಜ್ಯದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಒಳ್ಳೆಯ ಆಡಳಿತ ಕೊಡಲು ತೀರ್ಮಾನ ಮಾಡಿದ್ದೇವೆ’ ಎಂದರು.

ಈ ವೇಳೆ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಕೂಡಾ ಇದ್ದರು.

ನೂತನ ಸಚಿವರ ಪಟ್ಟಿಯಲ್ಲಿ– 8 ಮಂದಿ ಲಿಂಗಾಯತ ವರ್ಗದವರು, ಇತರೆ ಹಿಂದುಳಿದ ವರ್ಗದ 7 ಶಾಸಕರು, 7 ಒಕ್ಕಲಿಗ ಶಾಸಕರು, ಮೂವರು ದಲಿತರು, ಒಬ್ಬರು ಎಸ್‌ಸಿ, ಎಸ್‌ಟಿ, ರೆಡ್ಡಿ ಹಾಗೂ ಮಹಿಳೆ.

* ಸಚಿವ ಸಂಪುಟ ಪಟ್ಟಿಯಲ್ಲಿ ಬಿ ವೈ ವಿಜಯೇಂದ್ರ ಹೆಸರು ಇಲ್ಲ. ವಿಜಯೇಂದ್ರ ಬಗ್ಗೆ ಯಡಿಯೂರಪ್ಪ ಅವರ ಜೊತೆ ರಾಷ್ಟ್ರೀಯ ನಾಯಕರು ಮಾತನಾಡಿದ್ದಾರೆ.

– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.