ರಮೇಶ್‌ಬಾಬು, ಆರತಿ ಕೃಷ್ಣ
ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಹಲವು ತಿಂಗಳಿಂದ ಖಾಲಿ ಇದ್ದ ನಾಲ್ಕು ಸದಸ್ಯ ಸ್ಥಾನಗಳಿಗೆ ಆರತಿ ಕೃಷ್ಣ, ರಮೇಶ್ ಬಾಬು, ಎಫ್.ಎಚ್. ಜಕ್ಕಪ್ಪನವರ್ ಮತ್ತು ಶಿವಕುಮಾರ್ ಅವರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಭಾನುವಾರ ಅಧಿಕೃತ ಆದೇಶ ಹೊರಡಿಸಿದೆ.
ಏಳು ತಿಂಗಳ ಹಗ್ಗ ಜಗ್ಗಾಟದ ಬಳಿಕ ಕಾಂಗ್ರೆಸ್ ಈ ನಾಲ್ವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಸಚಿವಾಲಯ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್‌ಬಾಬು, ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ಅಧ್ಯಕ್ಷೆ ಆರತಿ ಕೃಷ್ಣ, ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಕ್ಕಪ್ಪನವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೂ ಆದ ಪತ್ರಕರ್ತ ಮೈಸೂರಿನ ಶಿವಕುಮಾರ್ ಅವರಿಗೆ ಅವಕಾಶ ಒಲಿದಿದೆ.
ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಕಾಂಗ್ರೆಸ್ ಯು.ಬಿ. ವೆಂಕಟೇಶ್ ಮತ್ತು ಪ್ರಕಾಶ್ ಕೆ. ರಾಥೋಡ್ ಅವರ ಅವಧಿ 2024ರ ಅಕ್ಟೋಬರ್‌ನಲ್ಲಿ ಮತ್ತು ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರ ಅವಧಿ 2025ರ ಜನವರಿ ವೇಳೆಗೆ ಮುಕ್ತಾಯಗೊಂಡಿತ್ತು. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸಿ.ಪಿ. ಯೋಗೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸ್ಥಾನಗಳು ಖಾಲಿಯಾಗಿದ್ದವು.
ಜಾತಿವಾರು ಲೆಕ್ಕಾಚಾರ: ನಾಮನಿರ್ದೇಶನಗೊಂಡಿರುವ ನಾಲ್ವರ ಪೈಕಿ ಆರತಿ ಕೃಷ್ಣ ಅವರು ಒಕ್ಕಲಿಗ, ರಮೇಶ್ ಬಾಬು ಅವರು ಹಿಂದುಳಿದ ವರ್ಗ, ಜಕ್ಕಪ್ಪನವರ್ ಹಾಗೂ ಶಿವಕುಮಾರ್ ಅವರು ದಲಿತ ಬಲಗೈ ಸಮುದಾಯಕ್ಕೆ ಸೇರಿದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.