ಮಳೆ
ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ನೈರುತ್ಯ ಮುಂಗಾರು ಒಳನಾಡಿನಲ್ಲಿ ಚುರುಕುಗೊಂಡಿದ್ದರೆ, ಕರಾವಳಿಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಆಗಸ್ಟ್‌ನಲ್ಲಿ ಸುರಿದ ಮಳೆಯು, ಮುಂಗಾರು ಅವಧಿಯ ಮಳೆ ಕೊರತೆಯನ್ನು ನೀಗಿಸಿದೆ.
ಈ ವರ್ಷ ನಿಗದಿತ ಅವಧಿಗೆ ರಾಜ್ಯ ಪ್ರವೇಶಿಸಿದ್ದ ಮುಂಗಾರು, ಪ್ರಾರಂಭದಲ್ಲಿ ಅಬ್ಬರಿಸಿದ್ದರೂ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಜೂನ್ ತಿಂಗಳಲ್ಲಿ ಒಳನಾಡಿನ ಹಲವು ಜಿಲ್ಲೆಗಳು ಸೇರಿ 14 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಜುಲೈ ತಿಂಗಳಲ್ಲಿ ಮಳೆ ಕೊರತೆ ಎದುರಿಸಿದ್ದ ಜಿಲ್ಲೆಗಳ ಸಂಖ್ಯೆ ಹತ್ತಕ್ಕೆ ಇಳಿದಿತ್ತು. ಆಗಸ್ಟ್‌ನಲ್ಲಿ ಉತ್ತರ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ (ಐದು ಜಿಲ್ಲೆಗಳು) ಮಾತ್ರ ವಾಡಿಕೆಯಷ್ಟು ಮಳೆಯಾಗಿಲ್ಲ. ಒಟ್ಟಾರೆ ಈ ವರ್ಷ ಹತ್ತು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾದರೆ, ಉಳಿದ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆ ಸುರಿದಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಜೂನ್ 1ರಿಂದ ಆಗಸ್ಟ್ 21ರ ಅವಧಿಯಲ್ಲಿ ಒಟ್ಟಾರೆ 65.6 ಸೆಂ.ಮೀ. ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ 63.5 ರಷ್ಟಾಗಿದ್ದು, ಶೇ 3ರಷ್ಟು ಅಧಿಕ ಮಳೆ ಸುರಿದಿದೆ. ಜೂನ್ ತಿಂಗಳಲ್ಲಿ ವಾಡಿಕೆ ಮಳೆ 19.9 ಸೆಂ.ಮೀ. ಆಗಿದ್ದರೆ, ರಾಜ್ಯದಲ್ಲಿ 20.3 ಸೆಂ.ಮೀ. ಮಳೆ ದಾಖಲಾಗಿತ್ತು. ಜುಲೈ ತಿಂಗಳಲ್ಲಿ ಕೆಲ ಜಿಲ್ಲೆಗಳು ಮಳೆಯ ತೀವ್ರ ಕೊರತೆ ಎದುರಿಸಿದ್ದು, ರಾಜ್ಯದಲ್ಲಿ ಒಟ್ಟಾರೆ 26.3 ಸೆಂ.ಮೀ. ಮಳೆಯಾಗಿತ್ತು. ತಿಂಗಳ ವಾಡಿಕೆ ಮಳೆ 27.1 ಸೆಂ.ಮಿ.ಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಈವರೆಗೆ ವಾಡಿಕೆ ಮಳೆ 16.4 ಸೆಂ.ಮೀ. ಆಗಿದ್ದರೆ, 19 ಸೆಂ.ಮೀ. ಮಳೆ ಸುರಿದಿದೆ. ವಾಡಿಕೆಗಿಂತ ಶೇ 16 ರಷ್ಟು ಅಧಿಕ ಮಳೆಯಾಗಿದೆ.
ಉತ್ತಮ ಮಳೆ ಮುಂದುವರಿಕೆ: ರಾಜ್ಯದಲ್ಲಿ ಈ ವರ್ಷ ಮುಂಗಾರು ಪೂರ್ವ ಉತ್ತಮ ಮಳೆಯಾಗಿತ್ತು. ಹವಾಮಾನ ಇಲಾಖೆ ಪ್ರಕಾರ ಮೇ ತಿಂಗಳು ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಒಂದೇ ತಿಂಗಳು ಸರಾಸರಿ 24.5 ಸೆಂ.ಮೀ. ಮಳೆಯಾಗಿತ್ತು. ಬಳಿಕ ಎರಡು ತಿಂಗಳು, ಕೆಲ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಆಗಸ್ಟ್ ಮೊದಲ ವಾರದಿಂದ ಮಳೆ ಮತ್ತೆ ಬಿರುಸು ಪಡೆದಿದ್ದು, ಮುಂದಿನ ಎರಡು ತಿಂಗಳು ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
‘ಕಳೆದ ವರ್ಷ ಮುಂಗಾರಿನಲ್ಲಿ ಮಳೆ ಕೊರತೆ ಎದುರಾಗಿತ್ತು. ಈ ವರ್ಷ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾದರೂ, ಜೂನ್ ಮತ್ತು ಜುಲೈನಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ರೈತರು ಕಂಗಾಲಾಗಿದ್ದರು. ಬೀದರ್, ಚಾಮರಾಜನಗರ, ಬಳ್ಳಾರಿ, ಕೊಪ್ಪಳ ಸೇರಿ ವಿವಿಧ ಜಿಲ್ಲೆಗಳಲ್ಲಿ ಜೂನ್ ತಿಂಗಳು ಶೇ 40ಕ್ಕೂ ಅಧಿಕ ಮಳೆ ಕೊರತೆ ಎದುರಾಗಿತ್ತು. ಆಗಸ್ಟ್‌ನಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ನೈರುತ್ಯ ಮುಂಗಾರು ಚುರುಕುಗೊಂಡಿದ್ದು ಉತ್ತಮ ಮಳೆಯಾಗುತ್ತಿದೆ. ಮುಂದಿನ ಎರಡು ತಿಂಗಳು ಇದೇ ರೀತಿ ಮಳೆ ಮುಂದುವರಿಯಲ್ಲಿದ್ದು ವಾಡಿಕೆಯಷ್ಟು ಮಳೆಯಾಗಲಿದೆಸಿ.ಎಸ್. ಪಾಟೀಲ ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.