ADVERTISEMENT

ಇಂದಿನಿಂದ ವಿಧಾನಮಂಡಲ ಅಧಿವೇಶನ: ಸರ್ಕಾರವನ್ನು ಹಣಿಯಲು ಪ್ರತಿಪಕ್ಷಗಳು ಸಜ್ಜು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 19:31 IST
Last Updated 20 ಸೆಪ್ಟೆಂಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌–19 ಹರಡುತ್ತಿರುವುದರಿಂದ ಬಿಗಿಯಾದ ಕ್ರಮಗಳೊಂದಿಗೆ ಸೋಮವಾರ ಆರಂಭಗೊಳ್ಳುವ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ಮುಗಿ ಬೀಳಲು ವಿರೋಧ ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ.

ಸಂಸದರು ಕೋವಿಡ್‌ ಸೋಂಕಿಗೆ ಒಳಗಾಗಿರುವುದರಿಂದ ಸಂಸತ್‌ ಅಧಿವೇಶನವನ್ನು ಮೊಟಕುಗೊಳಿಸಲು ನಿರ್ಧರಿಸಿದ ಮಾದರಿಯಲ್ಲೇ ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಮೂರೇ ದಿನಗಳ ಕಾಲ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ಕಾಂಗ್ರೆಸ್‌ ಪಕ್ಷ ಇದನ್ನು ವಿರೋಧಿಸಿದೆ.

ಒಟ್ಟು ಎಂಟು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ 19 ಸುಗ್ರೀವಾಜ್ಞೆಗಳೂ ಸೇರಿ ಒಟ್ಟು 31 ಮಸೂದೆ ಗಳು ಮಂಡನೆಯಾಗಲಿವೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಸುಗ್ರೀವಾಜ್ಞೆ (ಎಪಿಎಂಸಿ) ಮತ್ತು ಕರ್ನಾಟಕ ಭೂಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆಗಳ ಬಗ್ಗೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ಮಸೂದೆಗಳ ಮಂಡನೆಯನ್ನು ವಿರೋಧಿಸಿ ಗದ್ದಲ ಎಬ್ಬಿಸುವ ಸಾಧ್ಯತೆ ಇದೆ. ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕ ರಿಸಿದ ಬಳಿಕ ಎದುರಿಸುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಸರ್ಕಾರದ ವಿರುದ್ಧ ಹರಿಹಾಯಲು ಕಾಂಗ್ರೆಸ್‌ ಹೆಚ್ಚು ಹುಮ್ಮಸ್ಸಿನಿಂದ ಸಜ್ಜಾಗಿದೆ.

ADVERTISEMENT

ಜೆಡಿಎಸ್ ಎಪಿಎಂಸಿ ಮತ್ತು ಭೂ ಸುಧಾರಣೆ ಕಾಯ್ದೆಗಳನ್ನು ವಿರೋಧಿ ಸಿದೆ, ಸರ್ಕಾರದ ವೈಫಲ್ಯಗಳನ್ನು ತೆರೆ ದಿಟ್ಟು, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆದಿದೆ. ಕೋವಿಡ್‌ ನಿರ್ವಹಣೆ, ನೆರೆ ಪ್ರದೇಶಗಳಲ್ಲಿ ಪರಿಹಾರ ವಿತರಣೆ, ಡ್ರಗ್ಸ್‌ ಪ್ರಕರಣ, ಡಿ.ಜೆ.ಹಳ್ಳಿ ಗಲಭೆಯ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿ ನಡೆಯುವ ಸಾಧ್ಯತೆಗಳಿವೆ. ವಿರೋಧ ಪಕ್ಷಗಳನ್ನು ಎದುರಿಸಲು ಬಿಜೆಪಿಯೂ ಸಿದ್ಧತೆ ನಡೆಸಿಕೊಂಡಿದೆ.

ಕೋವಿಡ್‌: 10 ಶಾಸಕರ ಗೈರು ಸಾಧ್ಯತೆ
ಅಧಿವೇಶನಕ್ಕೆ ಆರು ಸಚಿವರು, ಮತ್ತು 10ಕ್ಕೂ ಹೆಚ್ಚು ಶಾಸಕರು ಸದನದ ಕಾರ್ಯ ಕಲಾಪಕ್ಕೆ ಗೈರಾಗುವುದು ಖಚಿತವಾಗಿದೆ.

‘ಕೋವಿಡ್‌ ಕಾರಣದಿಂದ ಸದನಕ್ಕೆ ಗೈರಾಗುತ್ತಿರುವ ಬಗ್ಗೆ ಈಗಾಗಲೇ ಐವರು ಸಚಿವರು ಸಭಾಧ್ಯಕ್ಷರಿಗೆ ಪತ್ರ ರವಾನಿಸಿದ್ದಾರೆ. ಆದರೆ, ಗೈರಾಗಲಿರುವ ಸಚಿವರು ಮತ್ತು ಶಾಸಕರ ನಿಖರ ಸಂಖ್ಯೆ ಗೊತ್ತಾಗಿಲ್ಲ’ ಎಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಭಟ್‌ ತಿಳಿಸಿದರು.

‘ಅಧಿವೇಶನ ಮೊಟಕು ಮಾಡಲು ಬಿಡಲ್ಲ’
‘ನನಗೆ ಮತ್ತು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಶನಿವಾರ ಕರೆ ಮಾಡಿ, ಕೊರೊನಾ ಕಾರಣಕ್ಕೆ ಅಧಿವೇಶನವನ್ನು ಮೂರು ದಿನಗಳಿಗೆ ಮೊಟಕುಗೊಳಿಸುತ್ತೇವೆ. ಸಹಕಾರ ನೀಡಬೇಕು ಅಂದರು. ಆದರೆ, ಮೊಟಕುಗೊಳಿಸಲು ನಾವು ಬಿಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಅಧಿವೇಶನ ಬೇಗ ಮುಗಿಸುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದೂ ಮುಖ್ಯಮಂತ್ರಿ ಹೇಳಿದರು. ಆದರೆ, ಇನ್ನೂ ಕೆಲವು ದಿನ ಸದನ ಮುಂದುವರಿಸುವಂತೆ ನಾವು ಒತ್ತಾಯಿಸುತ್ತೇವೆ’ ಎಂದರು.

‘ಪ್ರಜಾಪ್ರಭುತ್ವ ಮುಗಿಸಲು ಬಿಜೆಪಿ ಹೊರಟಿದೆ’ ಎಂದು ಆರೋಪಿಸಿದ ಶಿವಕುಮಾರ್‌, ‘ರಾಜ್ಯದಲ್ಲಿ ನೆರೆ, ಬರ, ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ. ಕೇಂದ್ರ ಪರಿಹಾರ ಕೊಡುತ್ತಿಲ್ಲ. ಈ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಬೇಕಿದೆ. ಸದನ ನಡೆಸಿದರೆ ಸರ್ಕಾರದ ಭ್ರಷ್ಟಾಚಾರ ಹೊರಗೆ ಬರುತ್ತದೆ. ಹೀಗಾಗಿ, ಬೇಡವೆಂಬ ಚಿಂತನೆಯಲ್ಲಿದ್ದಾರೆ’ ಎಂದೂ ದೂರಿದರು.

ಕೋವಿಡ್‌ ಕಾರಣಕ್ಕೆ ಸದನಕ್ಕೆ ಗೈರಾಗುವವರು

ಸಚಿವರು
* ಡಾ.ಸಿ.ಎನ್‌. ಅಶ್ವತ್ಥನಾರಾಯಣ (ಉಪ ಮುಖ್ಯಮಂತ್ರಿ)

* ಬಸವರಾಜ ಬೊಮ್ಮಾಯಿ (ಗೃಹ ಸಚಿವ)

* ಬೈರತಿ ಬಸವರಾಜ್‌ (ನಗರಾಭಿವೃದ್ಧಿ)

* ಕೆ. ಗೋಪಾಲಯ್ಯ (ಆಹಾರ)

* ಪ್ರಭು ಚವಾಣ್ (ಪಶು ಸಂಗೋಪನೆ)

* ಶಶಿಕಲಾ ಜೊಲ್ಲೆ (ಮಹಿಳಾ ಮತ್ತು ಮಕ್ಕಳ ಕಲ್ಯಾಣ)

***

ಶಾಸಕರು

* ಎನ್‌.ಎ. ಹ್ಯಾರಿಸ್‌ (ಶಾಂತಿನಗರ)

* ಎಚ್‌.ಪಿ. ಮಂಜುನಾಥ್ (ಹುಣಸೂರು)

* ಕೆ. ಮಹದೇವ್‌ (ಪಿರಿಯಾಪಟ್ಟಣ)

* ಬಿ. ನಾರಾಯಣ ರಾವ್‌ (ಬಸವಕಲ್ಯಾಣ)

* ಡಿ.ಎಸ್.ಹುಲಗೇರಿ (ಲಿಂಗಸುಗೂರು)

* ಬಸನಗೌಡ ದದ್ದಲ (ರಾಯಚೂರು ಗ್ರಾಮೀಣ)

* ವೆಂಕಟರಾವ್ ನಾಡಗೌಡ (ಸಿಂಧನೂರು)

* ಪ್ರಿಯಾಂಕ್ ಖರ್ಗೆ (ಚಿತ್ತಾಪುರ)

* ಉಮಾನಾಥ ಕೋಟ್ಯಾನ್ (ಮೂಲ್ಕಿ-ಮೂಡುಬಿದಿರೆ)

* ಡಿ.ಸಿ.ಗೌರಿಶಂಕರ್ (ತುಮಕೂರು ಗ್ರಾಮಾಂತರ)‌

* ಎಚ್‌.ಕೆ. ಕುಮಾರಸ್ವಾಮಿ (ಮೂಡಿಗೆರೆ)

*ಕುಸುಮಾವತಿ ಶಿವಳ್ಳಿ (ಕುಂದಗೋಳ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.