ADVERTISEMENT

ವ್ಯಕ್ತಿಗಳು, ಟ್ರಸ್ಟ್‌ಗಳ ಹೆಸರಿಗೆ ಕೊಕ್‌: ದೇಗುಲಗಳಿಗೆ ಸೇರಿತು 11,499 ಎಕರೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 23:30 IST
Last Updated 5 ಜನವರಿ 2025, 23:30 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಜರಾಯಿ ದೇವಸ್ಥಾನಗಳ ಜಮೀನುಗಳ ಖಾತೆಗಳನ್ನು ದೇವಾಲಯಗಳ ಹೆಸರಿಗೇ ಇಂಡೀಕರಿಸುವ ಪ್ರಕ್ರಿಯೆ ಬಿರುಸು ಪಡೆದಿದೆ. 19 ತಿಂಗಳಲ್ಲಿ 11,499 ಎಕರೆ ವಿಸ್ತೀರ್ಣದ ಜಮೀನುಗಳ ಖಾತೆಗಳನ್ನು ದೇವಾಲಯಗಳ ಹೆಸರಿಗೆ ಇಂಡೀಕರಿಸಲಾಗಿದೆ.

2023ರ ಮೇ ತಿಂಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವ ಹೊತ್ತಿನಲ್ಲಿ, ಇಲಾಖೆಯ ಅಧೀನದ ದೇವಸ್ಥಾನಗಳಿಗೆ ಸಂಬಂಧಿಸಿದ 3,914 ಎಕರೆ ಆಸ್ತಿಗಳ ದಾಖಲೆಗಳನ್ನು ಮಾತ್ರ ಸಂಬಂಧಿಸಿದ ದೇವಾಲಯಗಳ ಹೆಸರಿಗೆ ಇಂಡೀಕರಣ ಮಾಡಲಾಗಿತ್ತು. ಒಟ್ಟು 15,413 ಎಕರೆ 17 ಗುಂಟೆ ಜಮೀನುಗಳ ದಾಖಲೆಗಳನ್ನು ದೇವಾಲಯಗಳ ಹೆಸರಿಗೆ ಇಂಡೀಕರಣ ಮಾಡಿದಂತಾಗಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 34,564 ದೇವಾಲಯಗಳಿವೆ. ಇವುಗಳಿಗೆ ಸೇರಿದ ಆಸ್ತಿಗಳ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿರಲಿಲ್ಲ. ಪಹಣಿ, ಮ್ಯುಟೇಷನ್‌ ದಾಖಲೆಗಳಲ್ಲಿ ದೇವಾಲಯಗಳ ಹೆಸರನ್ನು ಸ್ಪಷ್ಟವಾಗಿ ದಾಖಲಿಸುತ್ತಿರಲಿಲ್ಲ. ಹಲವು ಪ್ರಕರಣಗಳಲ್ಲಿ ವ್ಯಕ್ತಿಗಳು, ಅನಧಿಕೃತ ಟ್ರಸ್ಟ್‌ಗಳ ಹೆಸರಿನಲ್ಲೇ ಈ ದೇವಾಲಯಗಳ ಆಸ್ತಿಗಳ ದಾಖಲೆಗಳಿದ್ದವು.

ADVERTISEMENT

ಮುಜರಾಯಿ ದೇವಸ್ಥಾನಗಳ ಆಸ್ತಿಗಳ ದಾಖಲೆಗಳ ಭೂಮಾಪನ ಮತ್ತು ಇಂಡೀಕರಣ ಪ್ರಕ್ರಿಯೆ 2008ರಿಂದಲೇ ಆರಂಭವಾಗಿತ್ತು. 2023ರವರೆಗೆ ಹೆಚ್ಚು ಪ್ರಗತಿಯಾಗಿರಲಿಲ್ಲ. ಕೆಲವು ವರ್ಗಗಳಲ್ಲಿ ಎರಡರಿಂದ ಮೂರು ಎಕರೆ ಜಮೀನಿನ ದಾಖಲೆಗಳನ್ನಷ್ಟೇ ಇಂಡೀಕರಿಸಿದ್ದ ಉದಾಹರಣೆಗಳೂ ಇದ್ದವು. 2023ರಿಂದ ಪ್ರಕ್ರಿಯೆ ಚುರುಕಾಗಿತ್ತು.

ಹಾಸನ ಜಿಲ್ಲೆಯಲ್ಲಿ ದೇವಸ್ಥಾನಗಳ ಹೆಸರಿಗೆ ಅತ್ಯಧಿಕ 1,663 ಎಕರೆ 31 ಗುಂಟೆ ವಿಸ್ತೀರ್ಣದ ಜಮೀನುಗಳ ದಾಖಲೆ ಇಂಡೀಕರಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 1,435 ಎಕರೆ 12 ಗುಂಟೆ, ಕಲಬುರಗಿ ಜಿಲ್ಲೆಯಲ್ಲಿ 1,172 ಎಕರೆ 13 ಗುಂಟೆ, ಮೈಸೂರು ಜಿಲ್ಲೆಯಲ್ಲಿ 1,164 ಎಕರೆ 17 ಗುಂಟೆ, ತುಮಕೂರು ಜಿಲ್ಲೆಯಲ್ಲಿ 1,123 ಎಕರೆ 30 ಗುಂಟೆ, ಮಂಡ್ಯ ಜಿಲ್ಲೆಯಲ್ಲಿ 1,070 ಎಕರೆ ವಿಸ್ತೀರ್ಣದ ಜಮೀನುಗಳ ದಾಖಲೆಗಳಲ್ಲಿ ದೇವಸ್ಥಾನಗಳ ಹೆಸರುಗಳನ್ನು ದಾಖಲಿಸಿ, ಭದ್ರಪಡಿಸಲಾಗಿದೆ.

ರಾಜ್ಯದಾದ್ಯಂತ ಈವರೆಗೆ 7,485 ಸರ್ವೆ ನಂಬರ್‌ಗಳಲ್ಲಿರುವ ದೇವಸ್ಥಾನಗಳ ಆಸ್ತಿಗಳ ಭೂಮಾಪನ ನಡೆಸಿ, ಗಡಿಗಳನ್ನು ಗುರುತಿಸಲಾಗಿದೆ. ಅವುಗಳ ದಾಖಲೆಗಳನ್ನು ಪರಿಶೀಲಿಸಿ ದೇವಸ್ಥಾನಕ್ಕೆ ಸಂಬಂಧಿಸದ ವ್ಯಕ್ತಿಗಳು, ಟ್ರಸ್ಟ್‌ಗಳ ಹೆಸರು ಕೈಬಿಡಲಾಗಿದೆ.

ಈ ಪೈಕಿ ಆರು ಸಾವಿರಕ್ಕೂ ಹೆಚ್ಚು ಸರ್ವೆ ನಂಬರ್‌ಗಳಲ್ಲಿನ ಆಸ್ತಿಗಳ ಭೂಮಾಪನ, ದಾಖಲೆ ಪರಿಶೀಲನೆ, ತಿದ್ದುಪಡಿ ಪ್ರಕ್ರಿಯೆಗಳು ಕಳೆದ 19 ತಿಂಗಳ ಅವಧಿಯಲ್ಲೇ ನಡೆದಿವೆ.

ಇನ್ನೂ ಎರಡು ವರ್ಷ ಬೇಕಿದೆ: ರಾಮಲಿಂಗಾರೆಡ್ಡಿ
‘ನಾನು ಮುಜರಾಯಿ ಸಚಿವನಾದ ಬಳಿಕ ದೇವಸ್ಥಾನಗಳ ಆಸ್ತಿಗಳ ದಾಖಲೆ ಮಾಹಿತಿ ಪರಿಶೀಲಿಸಿದ್ದೆ. ನಿರ್ವಹಣೆ ಸಮರ್ಪಕವಾಗಿಲ್ಲ ಎಂಬುದು ಗಮನಕ್ಕೆ ಬರುತ್ತಿದ್ದಂತೆಯೇ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪಹಣಿ ಇಂಡೀಕರಣ ಪ್ರಕ್ರಿಯೆ ಆರಂಭಿಸಲು ಸೂಚಿಸಿದ್ದೆ. ಪರಿಣಾಮ ಎರಡು ವರ್ಷಗಳಲ್ಲಿ 11,499 ಎಕರೆ ವಿಸ್ತೀರ್ಣದ ಆಸ್ತಿಗಳ ದಾಖಲೆಗಳನ್ನು ಸರಿಪಡಿಸಲಾಗಿದೆ’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಪ್ರತಿ ತಿಂಗಳೂ ಮುಜರಾಯಿ ಆಸ್ತಿಗಳ ಭೂಮಾಪನ, ದಾಖಲೆ ಪರಿಶೀಲನೆ, ತಿದ್ದುಪಡಿ, ಇಂಡೀಕರಣಕ್ಕೆ ಗುರಿ ನಿಗದಿಪಡಿಸಲಾಗಿದೆ. ಎಲ್ಲ ದೇವಾಲಯಗಳ ಆಸ್ತಿಗಳ ದಾಖಲೆಗಳನ್ನು ಸರಿಪಡಿಸಿ, ದೇವಸ್ಥಾನಗಳ ಹೆಸರಿಗೆ ಸರಿಯಾದ ಕ್ರಮದಲ್ಲಿ ದಾಖಲಿಸಲು ಇನ್ನೂ ಎರಡು ವರ್ಷ ಬೇಕಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.