
ಡಿಕೆಶಿ ಅವರಿಂದ ಬ್ಲೂ ಪೀಕ್ ಕ್ಯಾಪ್ ವಿತರಣೆ
ಬೆಂಗಳೂರು: ರಾಜ್ಯದ ಹೆಡ್ ಕಾನ್‌ಸ್ಟೆಬಲ್‌ಗಳು, ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಸ್ಲೋಚ್ ಹ್ಯಾಟ್ (ಟೋಪಿ) ಬದಲಾಗಿ ‘ನೇವಿ ಬ್ಲೂ ಪೀಕ್ ಕ್ಯಾಪ್’ ಅನ್ನು ವಿತರಿಸುವ ಕಾರ್ಯಕ್ರಮಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.
ಇಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಸಿಬ್ಬಂದಿಯ ಪೀಕ್ ಕ್ಯಾಪ್ ವಿತರಣೆ ಹಾಗೂ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು ಸನ್ಮಿತ್ರ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ಪೊಲೀಸ್ ಸಿಬ್ಬಂದಿಗೆ ಸಾಂಕೇತಿಕವಾಗಿ ನೀಲಿ ಬಣ್ಣದ ಪೀಕ್ ಕ್ಯಾಪ್ ವಿತರಿಸಿದರು.
ಶೀಘ್ರದಲ್ಲೇ ರಾಜ್ಯದ ಸಂಬಂಧಿಸಿದ ಎಲ್ಲ ಸಿಬ್ಬಂದಿಗೆ ಈ ಪೀಕ್ ಕ್ಯಾಪ್‌ಗಳು ಲಭ್ಯವಾಗಲಿವೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ. ಈ ಕುರಿತು ಡಿಕೆಶಿ ಅವರು ಟ್ವೀಟ್ ಮಾಡಿದ್ದಾರೆ.
ಕಳೆದ 4 ದಶಕಗಳಿಂದ ಪೀಕ್ ಕ್ಯಾಪ್ ನೀಡುವಂತೆ ಪೊಲೀಸರು ಬೇಡಿಕೆಯಿಟ್ಟಿದ್ದರು. ಕೊನೆಗೆ ನಮ್ಮ ಸರ್ಕಾರ ಹೊಸ ಮಾದರಿಯ ಕಡು ನೀಲಿ ಬಣ್ಣದ ಪೀಕ್ ಕ್ಯಾಪ್ ವಿತರಿಸಲು ಒಪ್ಪಿಗೆ ನೀಡಿತ್ತು. ಹೊಸ ಪೀಕ್ ಕ್ಯಾಪ್‌ನಲ್ಲಿ ಎಲಾಸ್ಟಿಕ್ ಇರುವುದರಿಂದ ಪೊಲೀಸರ ತಲೆಯಲ್ಲಿ ಸರಿಯಾಗಿ ಕೂರಲಿವೆ. ಇಂದಿನಿಂದ ರಾಜ್ಯದ 1 ಲಕ್ಷ ಪೊಲೀಸ್ ಸಿಬ್ಬಂದಿಗೆ ಹೊಸ ಪೀಕ್ ಕ್ಯಾಪ್ ನೀಡುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದ್ದಾರೆ.
ಈ ಮೂಲಕ ಪೊಲೀಸರು ಖಾಕಿ ಸಮವಸ್ತ್ರದ ಮೇಲೆ ಬಳಸುತ್ತಿದ್ದ ಸ್ಲೋಚ್ ಕ್ಯಾಪ್‌ಗೆ ವಿದಾಯ ಹೇಳಲಾಯಿತು.
ಭಾರತೀಯ ನೌಕಾಪಡೆ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಗೋವಾ ಹಾಗೂ ದೆಹಲಿ ಸೇರಿದಂತೆ ಇತರೆ ರಾಜ್ಯಗಳ ಪೊಲೀಸರು ಧರಿಸುವ ಟೋಪಿಗಳನ್ನು ರಾಜ್ಯದ ಹೆಡ್ ಕಾನ್‌ಸ್ಟೆಬಲ್‌ಗಳು, ಕಾನ್‌ಸ್ಟೆಬಲ್‌ಗಳು ಧರಿಸಲಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜೂನ್ 16ರಂದು ನಡೆದ ವಾರ್ಷಿಕ ಸಮ್ಮೇಳನ ಸಭೆಯಲ್ಲಿ ಪೊಲೀಸ್ ಸಿಬ್ಬಂದಿಯ ಟೋಪಿ ಬದಲಾವಣೆ ಕುರಿತು ಚರ್ಚೆ ನಡೆಸಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ತೆಲಂಗಾಣ ಮಾದರಿ ಟೋಪಿ ಬಗ್ಗೆ ಒಲವು ತೋರಿಸಿದ್ದರು. ಇದೀಗ ತೆಲಂಗಾಣ ಮಾದರಿಯ ಕ್ಯಾಪ್‌ಗಳು ಅಂತಿಮವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.