ADVERTISEMENT

ಯಡಿಯೂರಪ್ಪ ಹೇಳಿಕೆ ಹಿಂದೆ ಬೇರೆಯೇ ತಂತ್ರಗಾರಿಕೆಯಿದೆ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 10:09 IST
Last Updated 6 ಜೂನ್ 2021, 10:09 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ರಾಜಕಾರಣದಲ್ಲಿ ನಾನಾ ತಂತ್ರಗಾರಿಕೆಗಳಿರುತ್ತವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆ ಕುರಿತ ಹೇಳಿಕೆಯ ಹಿಂದೆಯೂ ಬೇರೆಯದೇ ತಂತ್ರಗಾರಿಕೆ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಯಡಿಯೂರಪ್ಪ ಅವರನ್ನು ಬದಲಿಸುವ ನಿರ್ಧಾರ ಅವರ ಪಕ್ಷಕ್ಕೆ ಸಂಬಂಧಿಸಿದ್ದು. ನಮಗೂ ಅದಕ್ಕೂ ಸಂಬಂಧ ಇಲ್ಲ. ಆದರೆ, ನನ್ನ ಪ್ರಕಾರ ಯಡಿಯೂರಪ್ಪ ಗಟ್ಟಿ ಮನುಷ್ಯ, ಅಷ್ಟು ಸಲೀಸಾಗಿ ಜಗ್ಗಲ್ಲ’ ಎಂದರು.

‘ಯಡಿಯೂರಪ್ಪ ಅವರ ಹೇಳಿಕೆಯನ್ನು 2–3 ರೀತಿಯಲ್ಲಿ ಬೇಕಾದರೂ ವಿಶ್ಲೇಷಣೆ ಮಾಡಬಹುದು. ನನ್ನನ್ನು ಮುಟ್ಟಿ ನೋಡಿ ಎಂಬ ಎಚ್ಚರಿಕೆ ಇರಬಹುದು. ನಾನು ಶಿಸ್ತಿನ ಸಿಪಾಯಿ ಎಂದೂ ಇರಬಹುದು. ನೀವು ಹೇಗೆ ವಿಶ್ಲೇಷಣೆ ಮಾಡುತ್ತೀರೋ ಮಾಡಿ’ ಎಂದರು.

‘ರಾಜಕಾರಣದಲ್ಲಿ ಹೇಳುವುದೊಂದು, ಮಾಡುವುದು ಮತ್ತೊಂದಿರುತ್ತದೆ. ರಾಜ್ಯ ಹಾಗೂ ಬಿಜೆಪಿ ರಾಜಕಾರಣದಲ್ಲಿ ಯಡಿಯೂರಪ್ಪ ಅವರು ಗಟ್ಟಿ ನಾಯಕ. ಅವರ ನಾಯಕತ್ವದಲ್ಲಿ ಚುನಾವಣೆ ನಡೆದಿದೆ. ಅವರ ನಾಯಕತ್ವದಲ್ಲೇ ನಮ್ಮ ಪಕ್ಷದ ಸ್ನೇಹಿತರನ್ನು ಕರೆದುಕೊಂಡು ಹೋಗಿ, ಬಿಜೆಪಿ ಸರ್ಕಾರ ಮಾಡಿದ್ದಾರೆ’ ಎಂದರು.

‘ಜನ ಒಪ್ಪುವುದು ಬಿಡುವುದು ಬೇರೆ ವಿಚಾರ. ವಿರೋಧ ಪಕ್ಷವಾಗಿ ನಾವು ಏನು ಬೇಕಾದರೂ ಹೇಳಬಹುದು. ಆಡಳಿತ ವೈಫಲ್ಯ, ಆಂತರಿಕ ಬಿಕ್ಕಟ್ಟು, ಏಳೆಂಟು ನಾಯಕರು ತಾವೇ ಮುಖ್ಯಮಂತ್ರಿ ಆಗಬೇಕು ಎಂದು ಸಿದ್ಧವಾಗಿದ್ದಾರೆ. ಮುಂದೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಎನ್ನುವವರು, ಹಿಂದೆ ತಾವೇ ಸೂಟ್ ಹೊಲಿಸಿ, ಮುಹೂರ್ತ ಇಟ್ಟುಕೊಂಡು ಸಿದ್ಧವಾಗಿದ್ದಾರೆ. ಎಲ್ಲವೂ ನಮಗೆ ಗೊತ್ತಿದೆ. ದುರ್ದೈವ ಏನೆಂದರೆ, ಬಿಜೆಪಿಯವರು ಶಿಸ್ತು ಕಳೆದುಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.