ADVERTISEMENT

ವನವಾಸ–ಅಜ್ಞಾತವಾಸ ಮುಗಿಯುತ್ತಿದೆ: ಪಟ್ಟಾಭಿಷೇಕ ನಡೆಯಬೇಕಿದೆ –ಶಾಸಕ ಯತ್ನಾಳ

‘ಏಕಾಂಗಿ ಹೋರಾಟವಲ್ಲ: ಬ್ರಹ್ಮಾಸ್ತ್ರವಿದೆ’

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 21:46 IST
Last Updated 6 ಜುಲೈ 2021, 21:46 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಮೈಸೂರು/ಚಾಮರಾಜನಗರ: ‘ನನ್ನ ರಾಜಕೀಯ ಜೀವನ ಅಂತ್ಯವಾದರೂ; ಭ್ರಷ್ಟಾಚಾರ, ಕುಟುಂಬ ರಾಜಕಾರಣ ವಿರುದ್ಧದ ಹೋರಾಟ ನಿಲ್ಲಲ್ಲ. ನನ್ನದು ಏಕಾಂಗಿ ಹೋರಾಟವಲ್ಲ. ಹಲವು ಸಚಿವರೇ ನನ್ನ ಬೆಂಬಲಕ್ಕಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಂಗಳವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಏಕಾಂಗಿಯಾಗಲು ನಾನು ಅಭಿಮನ್ಯುವಲ್ಲ; ಅರ್ಜುನ. ನಮ್ಮ ವನವಾಸ, ಅಜ್ಞಾತವಾಸ ಎಲ್ಲವೂ ಮುಗಿದಿವೆ. ಪಟ್ಟಾಭಿಷೇಕ ಬಾಕಿಯಿದೆಯಷ್ಟೇ. ಅದೂ ಒಳ್ಳೆಯವರಿಗೆ ಆಗಲಿದೆ’ ಎಂದರು.

‘ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿ ಈ ಹಿಂದೆ ನಡೆದದ್ದು ಮೂರು ದಿನದ ನಾಟಕ. ಬುಧವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಬಹುದು. ಪ್ರಧಾನಿ ಮೋದಿ ಮೇಲೆ ವಿಶ್ವಾಸವಿದೆ. ವಿಶ್ವಾಸಾರ್ಹ ರಾಷ್ಟ್ರೀಯ ನಾಯಕರಿಬ್ಬರನ್ನು ರಾಜ್ಯಕ್ಕೆ ಕಳುಹಿಸಿಕೊಡಿ. ಶಾಸಕಾಂಗ ಪಕ್ಷದ ಸಭೆ ನಡೆಸಿ. ಪ್ರತಿಯೊಬ್ಬ ಶಾಸಕರಿಂದಲೂ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಿ. ಆಗ ಸತ್ಯ ಬೆಳಕಿಗೆ ಬರಲಿದೆ’ ಎಂದು ಹೇಳಿದರು.

ADVERTISEMENT

‘ಯಾರೂ ನಿರೀಕ್ಷೆ ಮಾಡದ, ಪ್ರಾಮಾಣಿಕ ಹಾಗೂ ಹಿಂದುತ್ವದ ಪರ ಇರುವವರು ಮುಖ್ಯಮಂತ್ರಿಯಾಗುತ್ತಾರೆ. ಹೈಕಮಾಂಡ್‌ ನನಗೆ ಜವಾಬ್ದಾರಿ ಕೊಟ್ಟರೆ ಬೇಡ ಎನ್ನುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಭ್ರಷ್ಟಾಚಾರದ ಬಗ್ಗೆ ನಾನು ಸುಮ್ಮನೆ ಆರೋಪ ಮಾಡುತ್ತಿಲ್ಲ. ದೊಡ್ಡ ಕರ್ಮಕಾಂಡವೇ ನಡೆದಿದೆ, ದಾಖಲೆಗ
ಳಿವೆ. ಮುಖ್ಯಮಂತ್ರಿ, ಸಚಿವನಾಗಬೇಕು ಎಂಬ ಕಾರಣಕ್ಕೆ ದೂರುತ್ತಿಲ್ಲ. ನನ್ನ ಹೋರಾಟ ನಿಸ್ವಾರ್ಥದ್ದು. ಸತ್ಯ–ಪ್ರಾಮಾಣಿಕವಾದದ್ದು’ ಎಂದರು.

‘ಯಡಿಯೂರಪ್ಪ ಪರ ಮಾತನಾಡುತ್ತಿರುವ ಮಠಾಧೀಶರ ಹೇಳಿಕೆ ಲಿಂಗಾಯತ ಸಮುದಾಯಕ್ಕೆ ಅವಮಾನ. ಅವರ ಪರ ಬ್ಯಾಟಿಂಗ್‌ ಮಾಡುತ್ತಿರುವ ಮಠಾಧೀಶರಿಗೆ ಎಚ್ಚರವಿರಲಿ. ನನ್ನ ಬಳಿಯಿರುವ ಬ್ರಹ್ಮಾಸ್ತ್ರ ಪ್ರಯೋಗಿಸಿದರೆ; ಈ ಎಲ್ಲ ಮಠಾಧೀಶರು ಮಠ ಬಿಟ್ಟು ಓಡಬೇಕಾಗುತ್ತದೆ. ಅಂತಹ ಕರ್ಮಕಾಂಡ ನಡೆದಿದೆ’ ಎಂದು ತಿಳಿಸಿದರು.

‘ಸಹಿ ಹಾಕೋ ಶಕ್ತಿಯಿಲ್ಲ: ‘ಮುಖ್ಯಮಂತ್ರಿಯ ಸಹಿಗಾಗಿ ಬರುವ ಕಡತಗಳಿಗೆ, ಸಹಿಯನ್ನು ಹಾಕೋ ಶಕ್ತಿ ಯಡಿಯೂರಪ‍್ಪನಿಗಿಲ್ಲ. ಮಗನ ಒತ್ತಾಯಕ್ಕೆ ವಿಧಾನಸೌಧಕ್ಕೆ ಹೋಗುತ್ತಿದ್ದಾರಷ್ಟೇ. ಕಾವೇರಿಯಲ್ಲಿ ಎಂಟು ಖುರ್ಚಿ ಹಾಕಿಕೊಂಡು ಅರ್ಧಗಂಟೆ ಸಭೆ ನಡೆಸುತ್ತಿದ್ದಾರಷ್ಟೇ. ಬಿಎಸ್‌ವೈ ನಿಷ್ಕ್ರಿಯರಾಗಿದ್ದಾರೆ’ ಎಂದು ಯತ್ನಾಳ ಗುಡುಗಿದರು.

ಯತ್ನಾಳ ಕಾರಿಗೆ ಮುತ್ತಿಗೆ
ಗೌಡ ಲಿಂಗಾಯತ ಸಮುದಾಯದ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಚಾಮರಾಜನಗರಕ್ಕೆ ಬಂದಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕಾರಿಗೆ ಮುತ್ತಿಗೆ ಹಾಕಿದ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಮುಖಂಡರು ಹಾಗೂ ಬಿಜೆ‍ಪಿ ಕಾರ್ಯಕರ್ತರು ಘೋಷಣೆ ಕೂಗಿದರು.

‘ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ, ಸಮಾಜ ಒಡೆಯುವ ಕೆಲಸವನ್ನು ಯತ್ನಾಳ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಪದೇಪದೇ ಹೇಳಿಕೆ ನೀಡಿ, ಪಕ್ಷ ವಿರೋಧಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸಾಧ್ಯತೆ ಅರಿತಿದ್ದ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯತ್ನಾಳ, ‘ನನ್ನ ವಿರುದ್ಧ ಬಹಳಷ್ಟು ಷಡ್ಯಂತ್ರಗಳು ನಡೆಯುತ್ತಿವೆ. ಪ್ರತಿಭಟನೆ ಯಾರು ನಡೆಸುತ್ತಿದ್ದಾರೆ ಎಂಬುದೂ ಗೊತ್ತಿದೆ. ಅವರಿಗೆ ನನ್ನ ಬಗ್ಗೆ ಭಯ ಬಂದಿದೆ’‌ ಎಂದರು.

ಬಿಜೆಪಿ ಒಡೆಯುವ ಷಡ್ಯಂತ್ರ
‘ವಿಜಯೇಂದ್ರ ಬಿಜೆಪಿ ಒಡೆಯುವ ಷಡ್ಯಂತ್ರ ನಡೆಸಿದ್ದಾನೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ಕ್ಲಬ್‌ವೊಂದರಲ್ಲಿ ಈ ಹುನ್ನಾರದ ಭಾಗವಾಗಿಯೇ ಸೋಮವಾರ ಸಭೆಯೊಂದನ್ನು ನಡೆಸಿದ್ದಾನೆ’ ಎಂದು ಯತ್ನಾಳ ಆರೋಪಿಸಿದರು.

‘ಕೆಲವೊಂದು ಶಾಸಕರನ್ನು ನನ್ನ ವಿರುದ್ಧ ಛೂ ಬಿಡಲಾಗಿದೆ. ಅವರು ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಅವಹೇಳನಕಾರಿಯಾಗಿ ಬರೆಯುತ್ತಿದ್ದಾರೆ. ಇದಕ್ಕೆಲ್ಲಾ ಅಂಜಲ್ಲ. ನ್ಯಾಯಾಂಗ ಸೇರಿದಂತೆ ಎಲ್ಲವನ್ನೂ ಖರೀದಿಸಬಹುದು ಎಂಬ ಮೂರ್ಖತನ ಅವರದ್ದಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಐತಿಹಾಸಿಕ ತೀರ್ಪು ಬರಲಿದೆ. ಕಾಯಿರಿ ಎಂದು’ ಮಾರ್ಮಿಕವಾಗಿ ಹೇಳಿದರು.

ಯಡಿಯೂರಪ್ಪ ಕಾಲಿನ ದೂಳಿಗೂ ಸಮರಾಗಲ್ಲ ಎಂದು ಸಚಿವ ಸೋಮಶೇಖರ್‌ ಟೀಕಿಸಿರುವುದಕ್ಕೆ, ‘ನಾನೆಂದೂ ಭ್ರಷ್ಟರು, ಅಯೋಗ್ಯರ ಕಾಲಿನ ದೂಳಾಗಲ್ಲ. ಪವಿತ್ರಾತ್ಮದ ದೂಳಾಗೋನು’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.