ADVERTISEMENT

ಜನಾಕ್ರೋಶದ ಬಿಸಿಯಲ್ಲೇ ಅಲ್ಲವೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡದ್ದು?: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2021, 6:27 IST
Last Updated 8 ನವೆಂಬರ್ 2021, 6:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜನಾಕ್ರೋಶದ ಬಿಸಿಯಲ್ಲೇ ಅಲ್ಲವೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬೀದಿಗೆ ಬಂದದ್ದು ಎಂದು ಬಿಜೆಪಿ ಪ್ರಶ್ನಿಸಿದೆ.

ರಾಜ್ಯದಾದ್ಯಂತ ಜನಾಕ್ರೋಶ ಸಭೆ ನಡೆಸುವುದಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ ಪ್ರತಿಪಕ್ಷದ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

‘ರಾಜ್ಯದಾದ್ಯಂತ ಜನಾಕ್ರೋಶ ಸಭೆ ನಡೆಸುವುದಕ್ಕೆ ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ಸಿಗರೇ ಯಾರ ವಿರುದ್ಧ ಈ ಜನಾಕ್ರೋಶ? 60 ವರ್ಷಗಳ ಕಾಲ ದೇಶ ಆಳಿದ ನಂತರವೂ ಅಸಮಾನತೆ, ಬಡತನವನ್ನು ಜೀವಂತವಿಟ್ಟ ಕಾರಣಕ್ಕಾಗಿ ಜನಾಕ್ರೋಶ ಸಭೆ ನಡೆಸುತ್ತೀರಾ’ ಎಂದು ಟ್ವೀಟ್‌ ಮೂಲಕ ಬಿಜೆಪಿ ಪ್ರಶ್ನಿಸಿದೆ.

ADVERTISEMENT

‘ಕಾಂಗ್ರೆಸ್ಸಿಗರೇ‌, ನೀವು ಭಾರತೀಯರಿಗೆ ಮಾಡಿದ ಐತಿಹಾಸಿಕ ಅನ್ಯಾಯವನ್ನು ಮರೆಯಲು ಸಾಧ್ಯವೇ? ಈ ಕಾರಣಕ್ಕಾಗಿ ಜನರೇ ನಿಮ್ಮ ವಿರುದ್ಧ ಆಕ್ರೋಶಗೊಂಡಿದ್ದಾರೆ. ಜನಾಕ್ರೋಶದ ಬಿಸಿಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬೀದಿಗೆ ಬಂದಿರುವುದು ನಿಜವಲ್ಲವೇ? #ಜನವಿರೋಧಿಕಾಂಗ್ರೆಸ್‌’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಉಲ್ಲೇಖಿಸಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ, ‘ನಿಮ್ಮನ್ನು‌ ನೀವೇ ಕಾಂಗ್ರೆಸ್ ರಥ ಎಳೆಯುವ ಡಬಲ್ ಎಂಜಿನ್ ಎಂದು ಬಿಂಬಿಸಿಕೊಂಡಿದ್ದೀರಿ, ಶುಭವಾಗಲಿ! ನಿಮ್ಮ ಡಬಲ್ ಎಂಜಿನ್ ಸಂಘಟನೆ ಸಂದರ್ಭದಲ್ಲಾದರೂ ದಲಿತ ಮುಖ್ಯಮಂತ್ರಿ ವಿಚಾರ ನನಸಾಗುವುದೇ? ದಲಿತರಿಗೆ ಮುಖ್ಯಮಂತ್ರಿ‌ ಪಟ್ಟ ಕಟ್ಟಲು ನಾವು ಬದ್ಧ ಎಂದು ಘೋಷಿಸಿ ನೋಡೋಣ’ ಎಂದು ಸವಾಲೆಸೆದಿದೆ.

‘ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಲೇ ಜನಾಕ್ರೋಶದ ಎದುರು ರಾಹುಲ್ ಗಾಂಧಿ ಸ್ವಕ್ಷೇತ್ರದಲ್ಲಿ ಸೋತರು, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು, ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ ಕೇವಲ 1 ಗೆಲುವು, ಬಹುಮತದಲ್ಲಿದ್ದ ಸರ್ಕಾರ 70 ಸ್ಥಾನಕ್ಕೆ‌ ಇಳಿಯಿತು ಕಾಂಗ್ರೆಸ್ವಿರುದ್ಧ ಜನಾಕ್ರೋಶನಿರಂತರವಾಗಿದೆ’ ಎಂದು ಬಿಜೆಪಿ ಟೀಕಿಸಿದೆ.

ಮೇಕೆದಾಟು ಸಮಾನಾಂತರ ಅಣೆಕಟ್ಟೆ ನಿರ್ಮಾಣ ಯೋಜನೆ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಆಗ್ರಹಿಸಿ ಡಿಸೆಂಬರ್‌ ಮೊದಲ ವಾರ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವುದಾಗಿ ಕಾಂಗ್ರೆಸ್‌ ಭಾನುವಾರ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.