ADVERTISEMENT

ಆಯಕಟ್ಟಿನ ಭೂಮಿ ಚೀನಾಕ್ಕೆ ಒಪ್ಪಿಸಿದವರು ಯಾರು: ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2021, 12:07 IST
Last Updated 7 ಆಗಸ್ಟ್ 2021, 12:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೆಲವು (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ!’ ಎಂದು ಸರಣಿ ಟ್ವೀಟ್ ಮಾಡಿರುವ ಬಿಜೆಪಿಯು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ. ಮಾಜಿ ಪ್ರಧಾನಿಗಳಾದ ಜವಹರಲಾಲ್ ನೆಹರು, ಇಂದಿರಾ ಗಾಂಧಿ ಅವರ ಇತಿಹಾಸವನ್ನೂ ಕೆದಕುವ ಮೂಲಕ #ಕಾಂಗ್ರೆಸ್‌ಯೋಗ್ಯರಾ ಎಂಬ ಹ್ಯಾಷ್‌ಟ್ಯಾಗ್ ಬಳಸಿ ವ್ಯಂಗ್ಯವಾಡಿದೆ.

‘ಹೌದು, ಕೆಲ (ಅ)ಯೋಗ್ಯರು ಇತಿಹಾಸ ಸೃಷ್ಟಿಸುತ್ತಾರೆ! ಭಾರತದ ಶಿರೋಭಾಗದ ಆಯಕಟ್ಟಿನ ಭೂಮಿಯನ್ನು ಚೀನಾದೇಶಕ್ಕೆ ಒಪ್ಪಿಸುವ ಮೂಲಕ ಇಬ್ಬರು ಇತಿಹಾಸ ಸೃಷ್ಟಿಸಿದ್ದರು. ಹಾಗಾದರೆ (ಅ)ಯೋಗ್ಯರು ಯಾರು?’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಬಿಜೆಪಿ, ನೆಹರು ಕುರಿತ ಕೆಲವು ಪತ್ರಿಕಾ ವರದಿಗಳ ತುಣುಕುಗಳನ್ನೂ ಲಗತ್ತಿಸಿದೆ.

‘ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಸಂಸತ್ತನ್ನು ಅಮಾನತಿನಲ್ಲಿಟ್ಟು ಅಧಿಕಾರ ಉಳಿಸಿಕೊಂಡಿದ್ದರು. ಹಾಗಾದರೆ (ಅ)ಯೋಗ್ಯರು ಯಾರು’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಇಂದಿರಾ ಗಾಂಧಿ ಅವರಿಗೆ ಸಂಬಂಧಿಸಿದ ಹಳೆಯ ಪತ್ರಿಕಾ ವರದಿಗಳ ತುಣುಕುಗಳನ್ನೂ ಲಗತ್ತಿಸಿದೆ.

ADVERTISEMENT

‘ಕೆಲವು (ಅ)ಯೋಗ್ಯರು ಸೃಷ್ಟಿಸುವ ಇತಿಹಾಸದ ಪುಟದಲ್ಲಿ ರಕ್ತದ ಕಲೆಗಳೇ ಹೆಚ್ಚು. ಅವರು ಅಪರಾಧಿಗಳು ದೇಶಬಿಟ್ಟು ಹೋಗಲು ಸಹಕಾರ ನೀಡುತ್ತಾರೆ, ಅಪರಾಧಿಗಳಿಗೆ ಅಧಿಕಾರವನ್ನೂ ನೀಡುತ್ತಾರೆ! ಹಾಗಾದರೆ, (ಅ)ಯೋಗ್ಯರು ಯಾರು’ ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.