ADVERTISEMENT

ಕಮಲ–ದಳ ಸನಿಹ?: ರಾಜಕೀಯದಲ್ಲಿ ಯಾರೂ ಆಜನ್ಮ ಶತ್ರುಗಳಲ್ಲ ಎಂದ ದೇವೇಗೌಡ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 19:57 IST
Last Updated 6 ನವೆಂಬರ್ 2019, 19:57 IST
   

ಬೆಂಗಳೂರು: ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ನೇತಾರರು ಆಡುತ್ತಿರುವ ಮಾತುಗಳು ರಾಜ್ಯ ರಾಜಕೀಯದಲ್ಲಿ ಮತ್ತೆ ಮೈತ್ರಿ ಪರ್ವಕ್ಕೆ ಮುನ್ನುಡಿಯಾಗಲಿವೆ ಎಂಬ ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ‘ಎಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬಗೆಗಿದ್ದ ನಿಲುವು ಬದಲಾಗಿದೆ’ ಎಂದು ಇತ್ತೀಚೆಗೆ ಹೇಳಿದ್ದರು. ಅದರ ಬೆನ್ನಲ್ಲೇ, ‘ರಾಜಕೀಯದಲ್ಲಿ ಯಾರೂ ಆಜನ್ಮ ಶತ್ರುಗಳಲ್ಲ. ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯ ಮಾತನಾಡುತ್ತಿರುತ್ತೇವೆ. ಕಾಲಕಾಲಕ್ಕೆ ಏನು ಆಗಬೇಕೋ ಅದು ಆಗುತ್ತದೆ’ ಎಂದು ದೇವೇಗೌಡರು ಹೇಳಿದ್ದಾರೆ.

ಉಭಯ ನಾಯಕರ ಹೇಳಿಕೆ ಹಿಂದೆ ಸಂದರ್ಭ ಬಂದಾಗ ‘ನೆರವಿನ ಹಸ್ತ’ ಚಾಚುವ ಔದಾರ್ಯ ಕಾಣಿಸುತ್ತಿದೆ. ಈಗ ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನಗಳಲ್ಲಿ ಗೆಲ್ಲದಿದ್ದರೆ, ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಮುಂದಾಲೋಚನೆಯಲ್ಲಿ ಈ ಮಾತುಗಳು ಹೊರಬೀಳುತ್ತಿವೆ ಎಂಬ ವಿಶ್ಲೇಷಣೆ ಶುರುವಾಗಿದೆ.

ADVERTISEMENT

ಭವಿಷ್ಯದ ‘ಮೈತ್ರಿ’ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಬಿಜೆಪಿ–ಜೆಡಿಎಸ್ ಮಧ್ಯೆ ಒಳ ಒಪ್ಪಂದ ನಡೆದೇ ಬಿಟ್ಟಿದೆ’ ಎಂದು ಪ್ರತಿಪಾದಿಸಿದ್ದಾರೆ.

ಆಗಿದ್ದೇನು: ‘ನೆರೆಯಿಂದ ಜನರು ಸಂಕಷ್ಟದಲ್ಲಿರುವಾಗ ಮಧ್ಯಂತರ ಚುನಾವಣೆ ಬೇಕಿಲ್ಲ. ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ. ಅಂತಹ ಸನ್ನಿವೇಶ ಎದುರಾದರೆ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಹೇಳಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಇಂತಹದೊಂದು ಚರ್ಚೆಗೆ ನಾಂದಿ ಹಾಡಿದ್ದರು.

ಕುಮಾರಸ್ವಾಮಿ ‘ಸಹಕಾರ’ಕ್ಕೆ ಯಡಿಯೂರಪ್ಪ ಧನ್ಯವಾದ ಸಲ್ಲಿಸಿದ್ದರು.

ಇದಕ್ಕೆ ಧ್ವನಿಗೂಡಿಸುವಂತೆ ಮಾತನಾಡಿದ್ದ ದೇವೇಗೌಡರು, ‘ಸಿದ್ದರಾಮಯ್ಯಗೆ ಚುನಾವಣೆ ಬೇಕಾಗಿದೆ. ನಮಗೆ ಸದ್ಯಕ್ಕೆ ಚುನಾವಣೆ ಬೇಕಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದ್ದರು. ದೇವೇಗೌಡರು ಯಡಿಯೂರಪ್ಪನವರ ಜತೆ ಮಾತುಕತೆಯಾಡಿದ್ದಾರೆ ಎಂಬ ಸುದ್ದಿಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಅದನ್ನು ದೇವೇಗೌಡರು ನಿರಾಕರಿಸಿದ್ದರು.

ಈ ಮಾತುಕತೆಯ ಪ್ರಸ್ತಾಪ ಮುಂದುವರಿದಿದ್ದು, ರಾಜಕೀಯ ಅಲೆಗಳನ್ನು ಎಬ್ಬಿಸಿದೆ.

‘ದೇವೇಗೌಡರು ನನಗೆ ದೂರವಾಣಿ ಕರೆಮಾಡಿ ಮಾತನಾಡಿದ್ದಾರೆ ಎಂಬುದರಲ್ಲಿ ಸತ್ಯಾಂಶವಿಲ್ಲ. ಮಾಜಿ ಪ್ರಧಾನಿಗೆ ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವ ಶಕ್ತಿ ಇದೆ. ದೇವೇಗೌಡರ ಹೆಸರನ್ನು ಪ್ರಸ್ತಾಪ ಮಾಡಿಲ್ಲ’ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ದೇವೇಗೌಡರು,‘ಯಡಿಯೂರಪ್ಪ ಜತೆ ಮಾತುಕತೆ ಮಾಡಿಲ್ಲ. ಅವರ ಜತೆ ಮಾತನಾಡಬಾರದು ಎಂದೇನೂ ಇಲ್ಲ. ಆದರೆ ಅಂತಹ ಸಂದರ್ಭ ಬಂದಿಲ್ಲ. ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಯಡಿಯೂರಪ್ಪ, ಸಿದ್ದರಾಮಯ್ಯ ನಮಗೆ ಆಜನ್ಮ ಶತ್ರುಗಳಲ್ಲ. ಆಯಾ ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯ ಮಾತನಾಡಿರುತ್ತೇವೆ. ಕಾಲ ಕಾಲಕ್ಕೆ ಏನು ಆಗಬೇಕು ಅದು ಆಗುತ್ತದೆ’ ಎಂದು ಹೇಳಿದ್ದಾರೆ.

*
ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್‌ ಮಧ್ಯೆ ಮಾತುಕತೆಯಾಗಿರುವುದು ಸತ್ಯ. ಆದರೆ, ಒಳ ಒಪ್ಪಂದದ ಷರತ್ತುಗಳು ಏನು ಎಂಬುದು ಗೊತ್ತಿಲ್ಲ.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

*
ಜೆಡಿಎಸ್ ಬೆಂಬಲ ನೀಡಿದರೆ ಬೇಡ ಎನ್ನುವುದಿಲ್ಲ. ಕೇಂದ್ರದಲ್ಲಿ ಬಹುಮತ ವಿದ್ದರೂ ಅನೇಕ‌ ಪಕ್ಷಗಳು ಬೆಂಬಲ ನೀಡಿವೆ. ಇಲ್ಲಿಯೂ ಬೆಂಬ‌ಲ ಕೊಟ್ಟರೆ ಮುಂದಾದರೆ ಬೇಡ ಎನ್ನಲಾಗದು.
-ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.