ADVERTISEMENT

ಪ್ರಯಾಣ ದರ ಹೆಚ್ಚಳ; ಮಹಿಳೆಯರಿಗೆ ಉಚಿತ, ಪುರುಷರಿಗೆ ಹೊರೆ ಖಚಿತ: ವಿಜಯೇಂದ್ರ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2025, 5:14 IST
Last Updated 3 ಜನವರಿ 2025, 5:14 IST
<div class="paragraphs"><p>ಬಿ.ವೈ ವಿಜಯೇಂದ್ರ</p></div>

ಬಿ.ವೈ ವಿಜಯೇಂದ್ರ

   

ಬೆಂಗಳೂರು: ಬಸ್‌ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದನ್ನು ವಿರೋಧಿಸಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಯಾವ ಮುಖವಿಟ್ಟುಕೊಂಡು ನೀವು ರಾಜ್ಯದ ಜನತೆಗೆ ಪಂಚಭಾಗ್ಯ ಯೋಜನೆಯನ್ನು ಕೊಟ್ಟಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತೀರಿ? ಶಕ್ತಿ ಯೋಜನೆಗೆ ಹಣ ಒದಗಿಸಲು ವಿಫಲವಾಗಿರುವ ನೀವು ಸಾರಿಗೆ ಸಂಸ್ಥೆಯು ನಷ್ಟದ ಹಾದಿಯನ್ನು ತುಳಿಯಲು ಕಾರಣರಾಗಿದ್ದೀರಿ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಮಹಿಳೆಯರಿಗೆ ಉಚಿತ ಪುರುಷರಿಗೆ ಅದರ ಹೊರೆ ಖಚಿತ’ ಎಂಬುದನ್ನು ಇದೀಗ ಶೇ 15ರಷ್ಟು ಬಸ್ ಪ್ರಯಾಣ ದರ ಏರಿಸುವ ಮೂಲಕ ಸಾರಿಗೆ ವ್ಯವಸ್ಥೆ ಆಶ್ರಯಿಸಿರುವ ಜನರಿಗೆ ಬರೆ ಎಳೆದಿದ್ದೀರಿ. ಶಕ್ತಿ ಯೋಜನೆ ಹೇಗಾಗಿದೆ ಎಂದರೆ ‘ವಾಣಿಜ್ಯ ಉತ್ಪನ್ನಗಳ ಮಾರಾಟದ ಆಕರ್ಷಣೆಗೆ ಮಳಿಗೆಗಳಲ್ಲಿ ಒಂದು ಖರೀದಿಸಿದರೆ-ಒಂದು ಉಚಿತ ಬೋರ್ಡ್ ಪ್ರದರ್ಶಿಸುವ ಮಾದರಿಯಲ್ಲಿ ರಾಜ್ಯದ ಜನರಿಗೆ ಟೋಪಿ ಹಾಕಲು ಹೊರಟಿದ್ದೀರಿ’ ಎಂದು ವ್ಯಂಗ್ಯವಾಡಿದ್ದಾರೆ.

ಶೇ.15 ರಷ್ಟು ಸಾರಿಗೆ ದರ ಹೆಚ್ಚಳದ ಕಾಂಗ್ರೆಸ್‌ ಸರ್ಕಾರದ ನಿರ್ಧಾರ ಅವೈಜ್ಞಾನಿಕ ಹಾಗೂ ಜನವಿರೋಧಿಯಾಗಿದೆ. ಇದನ್ನು ವಿರೋಧಿಸಿ ಬಿಜೆಪಿ ಜನರ ಪರ ದನಿ ಎತ್ತಲಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.