ADVERTISEMENT

ಬಿಜೆಪಿ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಸೀಮಿತ: ಕಾಂಗ್ರೆಸ್ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2022, 9:49 IST
Last Updated 25 ಅಕ್ಟೋಬರ್ 2022, 9:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಿಸ್ತಿನ ಪಕ್ಷ ಎಂದುಕೊಳ್ಳುವ ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಯತ್ನಾಳ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶಿಸ್ತಿನ ಪಕ್ಷ ಎಂದುಕೊಳ್ಳುವ ಬಿಜೆಪಿಗೆ ಯತ್ನಾಳ್‌ ಒಬ್ಬರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದಾದರೆ ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು ಎಂಬುದು ಸ್ಪಷ್ಟ’ ಎಂದು ಲೇವಡಿ ಮಾಡಿದೆ.

‘ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಯತ್ನಾಳ್ ಆಡುವ ಮಾತುಗಳು ಬಿ.ಎಲ್‌.ಸಂತೋಷ್ ಅವರದ್ದು, ಬಾಯಿ ಮಾತ್ರ ಯತ್ನಾಳ್‌ರದ್ದು’ ಎಂದು ಕಾಂಗ್ರೆಸ್ ಕಿಚಾಯಿಸಿದೆ.

ADVERTISEMENT

'ಕಾಂಗ್ರೆಸ್‌ ಕಿಟಕಿ ಇಣುಕುವುದರಲ್ಲೇ ನಿರತರಾಗಿದ್ದ ಬಿಜೆಪಿಗೆ ತಮ್ಮಲ್ಲಿನ ಬಿಜೆಪಿ Vs ಬಿಜೆಪಿ ಕದನದಲ್ಲಿ ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ. ಅವರ ಹಾವುಗಳು ಎಲ್ಲೆಲ್ಲಿರುತ್ತವೆ, ಎಲ್ಲೆಲ್ಲಿ ಹೆಡೆ ಎತ್ತುತ್ತವೆ ಎಂಬುದು ಸ್ವತಃ ಬಿಜೆಪಿಗೇ ತಿಳಿಯುತ್ತಿಲ್ಲ. ಯತ್ನಾಳರ ಹಾವು ಯಾವುದು? ಭ್ರಷ್ಟಾಚಾರದ ಹಾವೇ? ಸಿ.ಡಿ ಹಾವೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಹುಕ್ಕೇರಿಯಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ್ದ ಯತ್ನಾಳ್‌ ಅವರುತಮ್ಮ ತಂಟೆಗೆ ಬಂದರೆ ನಿಜವಾದ ಹಾವು ಬಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದು ವರದಿಯಾಗಿದೆ. ವಿಜಯಪುರದ ಮಹಾನಗರ ಪಾಲಿಕೆ ಚುನಾವಣೆಗೆ ಬೆಂಗಳೂರಿನಿಂದ ಹಣ ಬರುತ್ತಿದೆ. ಮುಧೋಳದ ಸಕ್ಕರೆ ಕಾರ್ಖಾನೆ ನಡೆಸುವವ ಒಬ್ಬ ರೊಕ್ಕ ಕಳುಹಿಸುತ್ತಿದ್ದಾನೆ ಎಂದು ಯತ್ನಾಳ ಹೇಳಿರುವುದಾಗಿ ವರದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.