ADVERTISEMENT

ಗುಂಪುಗಾರಿಕೆ ತಡೆಗೆ ವಿಜಯೇಂದ್ರ ವಿಫಲ: ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 16:07 IST
Last Updated 25 ಜನವರಿ 2025, 16:07 IST
ಡಿ.ವಿ. ಸದಾನಂದ ಗೌಡ 
ಡಿ.ವಿ. ಸದಾನಂದ ಗೌಡ    

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ನಂತರ ಬಿ.ವೈ. ವಿಜಯೇಂದ್ರ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ತಮ್ಮನ್ನು ಟೀಕೆ ಮಾಡುವ ಪಕ್ಷದ ಇತರೆ ಮುಖಂಡರು, ಶಾಸಕರನ್ನು ಕರೆದು ಮಾತನಾಡುವ ಪ್ರಯತ್ನವನ್ನೇ ಮಾಡಲಿಲ್ಲ. ಪಕ್ಷದಲ್ಲಿನ ಗುಂಪುಗಾರಿಕೆ ಮಿತಿಮೀರಿದೆ. ಅಧ್ಯಕ್ಷ ಸ್ಥಾನದಲ್ಲಿ ಕುಳಿತವರು ಆಂತರಿಕ ಜಗಳ, ಭಿನ್ನಾಭಿಪ್ರಾಯಗಳನ್ನು ಸ್ವತಃ ಸರಿಪಡಿಸಿಕೊಳ್ಳಬೇಕು. ಸಾಧ್ಯವಾಗದೇ ಇದ್ದಾಗ ವರಿಷ್ಠರ ಗಮನಕ್ಕೆ ತರಬೇಕು. ಇಂತಹ ಯಾವ ಪ್ರಯತ್ನಗಳನ್ನೂ ವಿಜಯೇಂದ್ರ ಮಾಡಲಿಲ್ಲ. ಆಂತರಿಕ ಜಗಳ ಮೇರೆ ಮೀರಿದರೆ ಪಕ್ಷವನ್ನು ಬಲಪಡಿಸುವ ಆಶಯ ಈಡೇರದು’ ಎಂದರು.

‘ಹಿಂದೆ ನಡೆದ ಪಕ್ಷದ ಪ್ರಮುಖ ನಾಯಕರ ಸಭೆಗಳಲ್ಲೂ ಭಿನ್ನಮತ ಶಮನ ಮಾಡುವ ದೃಢ ನಿರ್ಧಾರ ತೆಗೆದುಕೊಳ್ಳಲಿಲ್ಲ. ಕೇವಲ ತೇಪೆ ಹಚ್ಚುವ ಕೆಲಸಗಳು ನಡೆದವು. ಮೊನ್ನೆ ನಡೆದ ಸಭೆಯಲ್ಲಿ ಎಲ್ಲರ ಅಹವಾಲು ಆಲಿಸಲಾಗಿದೆ. ಪಕ್ಷಕ್ಕೆ ವಿಜಯೇಂದ್ರ ಅವರು ತಾತ್ಕಾಲಿಕ ಅಧ್ಯಕ್ಷ. ಚುನಾವಣೆಯ ಮೂಲಕ ಪೂರ್ಣಾವಧಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು’ ಎಂದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.