ADVERTISEMENT

ಬೊಮ್ಮಾಯಿ ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುತ್ತತುದಿಗೆ ಏರಿದ್ದಾರೆ: ಗುಂಡೂರಾವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2023, 7:31 IST
Last Updated 7 ಜೂನ್ 2023, 7:31 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್    

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುಟ್ಟತುದಿಗೆ ಏರಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

‘ಅತಿ ಶೀಘ್ರದಲ್ಲೇ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ತಲೆದೋರಬಹುದು’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಬೊಮ್ಮಾಯಿ ಅವರನ್ನು ನಾನು ಪ್ರಾಜ್ಞರು ಹಾಗೂ ಪ್ರಜ್ಞಾವಂತರೆಂದು ಭಾವಿಸಿದ್ದೆ. ಆದರೆ, ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ಜನತಾ ಪರಿವಾರದ ಬೊಮ್ಮಾಯಿ, ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುತ್ತತುದಿಗೆ ಏರಿದ್ದಾರೆ’ ಎಂದು ಗುಡುಗಿದ್ದಾರೆ.

ಬೊಮ್ಮಾಯಿಯವರೇ, ನೀವು ಮುಖ್ಯಮಂತ್ರಿ ಆಗಿದ್ದವರು. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ತಪ್ಪೇ ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.

ADVERTISEMENT

‘ಬೊಮ್ಮಾಯಿಯವರೇ, ಯುಪಿಎ ಅವಧಿಯಲ್ಲಿ ಅಪರಾಧಿಗಳ ರಕ್ಷಣೆಯಾಗುತಿತ್ತು ಎಂದು ಹೇಳಿದ್ದೀರಿ‌. ನಮ್ಮ ಅವಧಿಯಲ್ಲಿ ಯಾವ ಅಪರಾಧಿಯ ರಕ್ಷಣೆಯಾಗಿದೆ ಎಂದು ಹೇಳಿ? ನಾರಾಯಣ ರಾಣೆ, ಸುವೇಂದು ಅಧಿಕಾರಿಯನ್ನು ಮಹಾಭ್ರಷ್ಟರೆಂದು ಬಿಂಬಿಸಿದ್ದು ನಿಮ್ಮ ಪಕ್ಷವೇ ಅಲ್ಲವೇ?, ಅವರೀಗ ನಿಮ್ಮ ಪಕ್ಷದ ಸದಸ್ಯರು, ಬೇರೆ ಪಕ್ಷದಲ್ಲಿದ್ದಾಗ ಮಹಾಭ್ರಷ್ಟರು ಈಗ ಅವರೇನು’ ಎಂದು ಗುಂಡೂರಾವ್ ಟೀಕಿಸಿದ್ದಾರೆ.

ಬೊಮ್ಮಾಯಿ ತಿರುಗೇಟು: ಕೇಂದ್ರದಲ್ಲಿ ಇಷ್ಟು ದಿನ ಅಪರಾಧಗಳನ್ನು ಮಾಡಿ ರಾಜಕೀಯ ರಕ್ಷಣೆಯನ್ನು ಯುಪಿಎ ಕಾಲದಲ್ಲಿ ಪಡೆಯುತ್ತಿದ್ದರು. ಈಗ ಕೇಂದ್ರ ಸರ್ಕಾರ ಅಪರಾಧ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡಿದೆ‌. ಇವೆಲ್ಲವೂ ಕೂಡ ನ್ಯಾಯಾಂಗದ ಪರಿಶೀಲನೆಯಲ್ಲಿ ನಡೆಯುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಹದಿನೈದು ದಿನಗಳು ಕಳೆದಿಲ್ಲ‌ ಬರಿ ಮಾತನಾಡಿದರೆ ಜೈಲಿಗೆ ಹಾಕುತ್ತೇವೆ ಎಂದು ಮಂತ್ರಿಗಳ ಬಾಯಲ್ಲಿ ಬರುತ್ತಿರುವುದು, ವಿರೋಧಿಗಳನ್ನು ನಿಮ್ಮ ಅಧಿಕಾರ ಬಲದಿಂದ ದಮನ ಮಾಡುವ ತಂತ್ರ 1975ರ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ. ಆರಂಭದಲ್ಲಿಯೇ ಅಧಿಕಾರದ ಮದದಿಂದ ಜನ ಕೊಟ್ಟ ಅಧಿಕಾರ ವಿರೋಧಿಗಳ ದಮನಕ್ಕಾಗಿ ಇದೆ ಎಂದು ತಾವು ಭಾವಿಸಿದ್ದರೆ ಖಂಡಿತವಾಗಿಯೂ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ವಿರುದ್ಧ ಬೊಮ್ಮಾಯಿ ಕಿಡಿಕಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.