ADVERTISEMENT

ಕಾಂಗ್ರೆಸ್‌ ಶಕ್ತಿಹೀನ: ಕೆ.ಎಸ್‌.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 15:14 IST
Last Updated 23 ಜುಲೈ 2020, 15:14 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಚಿತ್ರದುರ್ಗ: ಕಾಂಗ್ರೆಸ್‌ಗೆ ಬಲ ಇದ್ದಿದ್ದರೆ ರೈತಸಂಘದ ಜೊತೆ ಸೇರಿ ಹೋರಾಟ ಮಾಡುವ ಅಗತ್ಯ ಇರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸಂಪೂರ್ಣ ಶಕ್ತಿಹೀನವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಕಾಂಗ್ರೆಸ್‌ ಹತಾಶ ಸ್ಥಿತಿಗೆ ತಲುಪಿದೆ. ಸಂಘ–ಸಂಸ್ಥೆ ಜತೆ ಸೇರಿ ಹೋರಾಟ ಮಾಡಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ವ್ಯಂಗ್ಯವಾಡಿದರು.

‘ಪಕ್ಷದ ನಾಯಕತ್ವಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸರ್ಕಾರದ ವಿರುದ್ಧ ಆರೋಪ ಮಾಡಿದರೆ ನಾಯಕರಾಗಬಹುದು ಎಂಬ ಭಾವನೆ ಅವರಲ್ಲಿದೆ. ಸೋನಿಯಾ ಗಾಂಧಿ ಅವರನ್ನು ತೃಪ್ತಿಪಡಿಸಲು ಸರ್ಕಾರದ ವಿರುದ್ದ ಆರೋಪ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ADVERTISEMENT

‘ಕೊರೊನಾ ಸೋಂಕು ಸೃಷ್ಟಿಸಿದ ತಲ್ಲಣದ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ರಾಜಕೀಯ ಮರೆತು ಸರ್ಕಾರಕ್ಕೆ ಬೆಂಬಲ ನೀಡಬೇಕಿತ್ತು. ಸಂಕಷ್ಟ ಎದುರಿಸಲು ವಿರೋಧ ಪಕ್ಷ ಕೈ ಜೋಡಿಸಿದ್ದರೆ ರಾಜ್ಯ ಮೆಚ್ಚುತ್ತಿತ್ತು. ಆದರೆ, ಹುಳುಕು ಹುಡುಕುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಸಿದ್ದರಾಮಯ್ಯ ಅವರಿಗೆ ಜನರೇ ಛೀಮಾರಿ ಹಾಕುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.