ADVERTISEMENT

ನಾಯಕತ್ವ ಬದಲಾವಣೆ ಚರ್ಚೆ: ಹೈಕಮಾಂಡ್ ಸ್ಪಷ್ಟನೆ ಕೊಡಬೇಕು– ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 10:56 IST
Last Updated 27 ಅಕ್ಟೋಬರ್ 2025, 10:56 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಂಗಳೂರು: ‘ನಾಯಕತ್ವ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಇದಕ್ಕೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು. ಈಗ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧನಾಗುವ ಪ್ರಶ್ನೆಯೇ ಬರುವುದಿಲ್ಲ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಗಟ್ಟಿಯಾಗಿ ಇದ್ದಾರೆ. ಹೀಗಾಗಿ, ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುವುದರಲ್ಲಿ ತಪ್ಪಿಲ್ಲ. ಆದರೆ, ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾರೆ. ಈಗ ನಮಗೆ ನಾಯಕತ್ವ ಬದಲಾವಣೆಯ ಸನ್ನಿವೇಶ ಕಾಣುತ್ತಿಲ್ಲ’ ಎಂದರು.

ಅಹಿಂದ ನಾಯಕತ್ವಕ್ಕೂ, ಸಿಎಂ ಗಾದಿಗೂ ಯಾವುದೇ ಸಂಬಂಧ ಇಲ್ಲ

ADVERTISEMENT

‘ಜಾತ್ಯತೀತ ಜನತಾದಳದಲ್ಲಿ ಇದ್ದಾಗಿನಿಂದಲೂ ಅಹಿಂದ ಭಾಗವಾಗಿದ್ದೇವೆ. ಅಹಿಂದ ನಾಯಕತ್ವಕ್ಕೂ, ಮುಖ್ಯಮಂತ್ರಿ ಗಾದಿಗೂ ಯಾವುದೇ ಸಂಬಂಧವಿಲ್ಲ. ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಯಾರೆಲ್ಲ ವಿರೋಧಿಸುತ್ತಿದ್ದಾರೊ ಅವರು ತಪ್ಪು ತಿಳಿದುಕೊಂಡಿದ್ದಾರೆ. ಅವರ ಹೇಳಿಕೆಗೆ ವ್ಯಾಖ್ಯಾನ ಅನಗತ್ಯ’ ಎಂದರು.

‘ಯತೀಂದ್ರ ಅವರು ಅಹಿಂದ ನಾಯಕತ್ವ ಮುನ್ನಡೆಸಲಿದ್ದಾರೆ ಎಂಬ ಅರ್ಥದಲ್ಲಿ‌ ಹೇಳಿದ್ದಾರೆ. ಸನ್ನಿವೇಶ, ಸಂದರ್ಭ ನೋಡಿ ನಿರ್ಧಾರ ಮಾಡುತ್ತೇನೆ. ಸಚಿವರಾದ ಜಿ. ಪರಮೇಶ್ವರ, ಎಚ್‌.ಸಿ. ಮಹದೇವಪ್ಪ ಸೇರಿದಂತೆ ಎಲ್ಲರೂ ಅಹಿಂದದ ಭಾಗವೇ ಆಗಿದ್ದಾರೆ’ ಎಂದರು.

‘ಅಹಿಂದ ನಾಯಕತ್ವಕ್ಕೆ ಇನ್ನೂ ಕಾಲ ಕೂಡಿ ಬರಬೇಕು. ಸುಮಾರು 50 ವರ್ಷಗಳಿಂದಲೂ ರಾಜ್ಯದಲ್ಲಿ ಅಹಿಂದ ವರ್ಗಗಳ ಸಂಘಟನೆ ನಡೆಯುತ್ತಿದೆ. ಈ ಹಿಂದೆಯೂ, ಈಗಲೂ, ಮುಂದೆಯೂ ಅಹಿಂದವನ್ನು ಮುಂದುವರೆಸಿಕೊಂಡು ಹೋಗುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಎಲ್ಲವೂ ಹೈಕಮಾಂಡ್‌ ನಿರ್ಧಾರ

‘ಯತೀಂದ್ರ ಎಲ್ಲಿಯೂ ಮುಖ್ಯಮಂತ್ರಿ ಸ್ಥಾನವಾಗಲಿ, ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆಯಾಗಲಿ ಹೇಳಿಲ್ಲ. 2028ರ ಚುನಾವಣೆಯ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡೋಣ. ಪಕ್ಷದ ಹೈಕಮಾಂಡ್ ಯಾರನ್ನು ಏನು ಮಾಡಬೇಕು ಎಂದು ನಿರ್ಧರಿಸುತ್ತದೆ’ ಎಂದೂ ಹೇಳಿದರು.

‘ದಲಿತ ಮುಖ್ಯಮಂತ್ರಿಗೆ ಅವಕಾಶ ಬರುವವರೆಗೆ ಕಾಯಬೇಕು. ಈಗಂತೂ ಅವಕಾಶ ಇಲ್ಲ. ನವೆಂಬರ್‌ ಕ್ರಾಂತಿ ಆಗುವುದಿಲ್ಲ. ಅದಕ್ಕೆ ಹೈಕಮಾಂಡ್‌ ಬಿಡುವುದಿಲ್ಲ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಒಬ್ಬರೇ, ಮಾಜಿ ಮುಖ್ಯಮಂತ್ರಿ ಶರದ್‌ ಪವಾರ್ ಕೂಡ ಒಬ್ಬರೇ. ಇನ್ನೊಬ್ಬ ಏಕನಾಥ್ ಶಿಂಧೆ, ಪವಾರ್ ಹುಟ್ಟಿಕೊಳ್ಳಲು ಆಗುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.