ADVERTISEMENT

ಮತಬ್ಯಾಂಕ್‌ಗಾಗಿ ಸಿದ್ದರಾಮಯ್ಯ ಪಟಲಾಂ ಏನು ಬೇಕಾದರೂ ಮಾಡಲು ಸಿದ್ಧ: ಬಿಜೆಪಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2022, 16:11 IST
Last Updated 7 ಫೆಬ್ರುವರಿ 2022, 16:11 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಬಿರಿಯಾನಿ ತಿನ್ನುವುದಕ್ಕಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಿ.ಎಂ.ಇಬ್ರಾಹಿಂ ಮನೆಗೂ ರಿಯಾಜ್ ಭಟ್ಕಳ್ ಮನೆಗೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

‘ಅಲ್ಪಸಂಖ್ಯಾತರ ಮತಬ್ಯಾಂಕ್ ಉಳಿಸಿಕೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಪಟಾಲಂ ಏನು ಬೇಕಾದರೂ ಮಾಡಲು ತಯಾರಿದೆ. ಬಿರಿಯಾನಿ ತಿನ್ನುವುದಕ್ಕಾಗಿ ಸಿದ್ದರಾಮಯ್ಯ ಅವರಿಗೆ ಸಿ.ಎಂ.ಇಬ್ರಾಹಿಂ ಮನೆಗೂ ರಿಯಾಜ್ ಭಟ್ಕಳ್ ಮನೆಗೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ADVERTISEMENT

‘ಹಿಜಾಬ್ ನೆಪದಲ್ಲಿ ಕರಾವಳಿ ಜಿಲ್ಲೆಯನ್ನು ಮತ್ತೆ ಮತೀಯ ಶಕ್ತಿಗಳ ಆಡುಂಬೊಲವಾಗಿ ಮಾರ್ಪಡಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಹಿಜಾಬ್ ಪ್ರತಿಭಟನೆ ಸಂದರ್ಭದಲ್ಲಿ ಕುಂದಾಪುರದಲ್ಲಿ ಇಬ್ಬರು ವ್ಯಕ್ತಿಗಳು ಆಯುಧ ಸಮೇತ ಸೆರೆಸಿಕ್ಕ ಪ್ರಕರಣ ಇದಕ್ಕೆ ಉದಾಹರಣೆಯಲ್ಲವೇ’ ಎಂದು ಕೆಲವು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದೆ.

‘ಮಾನ್ಯ ಸಿದ್ದರಾಮಯ್ಯ ಅವರೇ, ಹಿಜಾಬ್ ಧರಿಸುವುದು‌ ಮೂಲಭೂತ ಹಕ್ಕು ಎಂದಿದ್ದೀರಿ. ಈಗ ಹಿಜಾಬ್ ಪ್ರತಿಭಟನೆಗೆ ಆಯುಧ ಸಮೇತ ಬಂದು ಸಿಕ್ಕಿ ಬಿದ್ದವರ ಬಗ್ಗೆ ಏನು ಹೇಳುತ್ತೀರಿ? ಮಾರಕಾಯುಧ ಹಿಡಿದು ಸಮಾಜದ ಶಾಂತಿಭಂಗ ಮಾಡುವುದು ಮೂಲಭೂತವಾದಿಗಳ ಮೂಲಭೂತ ಹಕ್ಕೇ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಕೇವಲ ಅಲ್ಪಸಂಖ್ಯಾತರು ಮಾತ್ರ ಕಾಣುತ್ತಿರುವುದು ದುರಂತ. ಕೇಸರಿ ಶಾಲನ್ನು ಬೇಡವೆಂದವರು ನೀವಲ್ಲವೇ? ಟಿಪ್ಪು ಜಯಂತಿ ಆಚರಿಸಿ ಹಾಗೂ ಟೋಪಿ ಧರಿಸಿ ಸಂಭ್ರಮಿಸಿದವರು ನೀವಲ್ಲವೇ? ಹಿಜಾಬ್ ಉದ್ದೇಶದ ಹಿಂದಿನ ಕರಾಳಮುಖ ಕಳಚುತ್ತಿದೆ. ಈಗೇನು ಹೇಳುವಿರಿ?’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.