ADVERTISEMENT

‘ಪೇ–ಸಿಎಂ’ ಪೋಸ್ಟರ್‌: ವಿಧಾನಸಭೆಯಲ್ಲಿ ಗದ್ದಲ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 19:30 IST
Last Updated 22 ಸೆಪ್ಟೆಂಬರ್ 2022, 19:30 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರದೊಂದಿಗೆ ‘ಪೇ–ಸಿಎಂ’ ಎಂಬ ಶೀರ್ಷಿಕೆಯಡಿ ನಗರದ ವಿವಿಧೆಡೆ ಪೋಸ್ಟರ್‌ ಅಂಟಿಸಿರುವ ಪ್ರಕರಣ ವಿಧಾನಸಭೆಯಲ್ಲಿ ಗುರುವಾರ ಗದ್ದಲಕ್ಕೆ ಕಾರಣವಾಯಿತು. ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನ ಸದಸ್ಯರು ಕೆಲಕಾಲ ತೀವ್ರ ವಾಕ್ಸಮರ ನಡೆಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಪಿ. ರಾಜೀವ್‌, ‘ಪೇ–ಸಿಎಂ ಎಂದು ಮುಖ್ಯಮಂತ್ರಿಯವರ ಭಾವಚಿತ್ರ ಬಳಸಿ ಪೋಸ್ಟರ್‌ ಅಂಟಿಸಿರುವುದು ದುರದೃಷ್ಟಕರ. ಒಂದು ರಾಜಕೀಯ ಪಕ್ಷ ಇಂತಹ ಆಂದೋಲನ ಆರಂಭಿಸಿದೆ. ಇದು ಕರ್ನಾಟಕದ ರಾಜಕಾರಣ ಅಧಃಪತನಕ್ಕೆ ಕುಸಿಯುತ್ತಿರುವುದರ ಸಾಕ್ಷಿ’ ಎಂದರು.

ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ‘ರಾಜಕೀಯವನ್ನು ಸರಿಯಾಗಿ ಮಾಡಲಿ. ಕಾನೂನಿನಲ್ಲಿ ಅವಕಾಶವಿದ್ದರೆ ಕ್ರಮ ಜರುಗಿಸಿ. ನಾವು ಎದುರಿಸಲು ಸಿದ್ಧ. ಮೈ ಪರಚಿಕೊಳ್ಳುವುದು ಏಕೆ’ ಎಂದು ಪ್ರಶ್ನಿಸಿದರು.

ADVERTISEMENT

ಕಾಂಗ್ರೆಸ್‌– ಬಿಜೆಪಿ ಸದಸ್ಯರು ವಾಕ್ಸಮರಕ್ಕೆ ಇಳಿದರು. ‘ಮುಖ್ಯಮಂತ್ರಿಯನ್ನು ಈ ರೀತಿ ಚಿತ್ರಿಸಿರುವುದು ಸರಿಯಲ್ಲ. ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಸಮರ್ಥಿಸಿಕೊಂಡಿದ್ದಾರೆ’ ಎಂದು ರಾಜೀವ್‌ ಹೇಳಿದರು. ‘ಹಿಂದೆ ನಿಮ್ಮ ಪ್ರಧಾನಿ ಕಾಂಗ್ರೆಸ್‌ ಸರ್ಕಾರವನ್ನು ಹತ್ತು ಪರ್ಸೆಂಟ್‌ ಸರ್ಕಾರ ಎಂದಿದ್ದರು. ಏನು ಆಧಾರವಿತ್ತು’ ಎಂದು ಕೃಷ್ಣ ಬೈರೇಗೌಡ ಕೇಳಿದರು.

ಗದ್ದಲ ಜೋರಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಜನಸೇವೆಯ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇವೆ. ಮಾಧ್ಯಮ, ಸಿನಿಮಾ, ಬರಹಗಳಲ್ಲಿ ರಾಜಕಾರಣಿಗಳನ್ನು ಚಿತ್ರಿಸುತ್ತಿರುವ ಪರಿ ನೋಡಿದರೆ ಬೇಸರ ಆಗುತ್ತದೆ. ಈ ಸ್ಥಿತಿ ತಲುಪಿರುವುದು ದುರ್ದೈವ. ಸೈಬರ್‌ ಮತ್ತು ಆಡಿಯೊ ರೆಕಾರ್ಡಿಂಗ್‌ ನಿಯಂತ್ರಿಸಲು ಕ್ರಮ ಅಗತ್ಯ’ ಎಂದರು.

‘ಇದರ ಹಿಂದೆ ಯಾರಿದ್ದಾರೆ ಎನ್ನುವುದು ತನಿಖೆಯಿಂದ ಹೊರ ಬರುತ್ತದೆ. ಎಲ್ಲರೂ ಆತ್ಮ ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ. ನಾವು ಮಾಮಡಿದ್ದರೆ ನಾವೇ ಅನುಭವಿಸುತ್ತೇವೆ. ಅವರು (ಕಾಂಗ್ರೆಸ್‌ನವರು) ಮಾಡಿದ್ದರೆ ಅವರು ಅನುಭವಿಸುತ್ತಾರೆ’ ಎಂದು ವಾಗ್ವಾದಕ್ಕೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.