ADVERTISEMENT

ಭ್ರಷ್ಟಾಚಾರಕ್ಕಷ್ಟೇ ಗುಜರಾತ್‌ ಮಾದರಿ: ಪ್ರಿಯಾಂಕ್‌ ಖರ್ಗೆ 

​ಪ್ರಜಾವಾಣಿ ವಾರ್ತೆ
Published 31 ಮೇ 2025, 16:39 IST
Last Updated 31 ಮೇ 2025, 16:39 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ಅಭಿವೃದ್ಧಿಗೆ ಕರ್ನಾಟಕ ಮಾದರಿಯಾದರೆ, ಭ್ರಷ್ಟಾಚಾರಕ್ಕೆ ಗುಜರಾತ್‌ ಮಾದರಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

‘ಗುಜರಾತ್‌ ಪಂಚಾಯತ್‌ ರಾಜ್‌ ಸಚಿವ ಬಚು ಖಬಾದ್‌ ಅವರ ಪುತ್ರ ಬಲವಂತ್ ಖಬಾದ್ ಅವರನ್ನು ಉದ್ಯೋಗ ಖಾತ್ರಿ ಯೋಜನೆಯ ಹಗರಣದಲ್ಲಿ ಬಂಧಿಸಲಾಗಿದೆ. ಅವರ ಇನ್ನೊಬ್ಬ ಪುತ್ರ ತಲೆ ಮರೆಸಿಕೊಂಡಿದ್ದಾನೆ. ತಮ್ಮ ಪುತ್ರರು ನಡೆಸಿದ ಸುಮಾರು ₹75 ಕೋಟಿ ಮೊತ್ತದ ಹಗರಣದ ಹೊಣೆ ಹೊತ್ತು ಬಚು ಖಬಾದ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರಾ’ ಎಂದು ಪ್ರಶ್ನಿಸಿದ್ದಾರೆ.

‘ಮಾತೆತ್ತಿದರೆ ರಾಜೀನಾಮೆ ಕೇಳುವ ಕರ್ನಾಟಕ ಬಿಜೆಪಿ, ಗುಜರಾತಿನ ಕಡೆಯೂ ಸ್ವಲ್ಪ ಕಣ್ಣು ಹಾಯಿಸುವುದು ಉತ್ತಮ. ನಾನೂ ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ತವರು ರಾಜ್ಯದಲ್ಲಿ ನಡೆದ ದೊಡ್ಡ ಹಗರಣ ಸಂಬಂಧ ಸಚಿವರ ರಾಜೀನಾಮೆ ಪಡೆಯುವುದು ಯಾವಾಗ’ ಎಂದಿದ್ದಾರೆ.

ADVERTISEMENT

ಕರ್ನಾಟಕದಲ್ಲಿ ಉದ್ಯೋಗ ಖಾತ್ರಿ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಹೆಚ್ಚು ಜನರು ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಮಹಿಳೆಯರ ಪಾಲುದಾರಿಕೆ ಹೆಚ್ಚಿದೆ. ಆದರೂ, ಕರ್ನಾಟಕಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಕಡಿತಗೊಳಿಸುವ ಮೂಲಕ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ. ಯೋಜನೆಯನ್ನು ಕರ್ನಾಟಕ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದು ಕೇಂದ್ರ ಸರ್ಕಾರಕ್ಕೆ ಇಷ್ಟವಾಗಿಲ್ಲ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.