ADVERTISEMENT

ಸಿದ್ದರಾಮಯ್ಯ ನಮ್ಮ ನಾಯಕರನ್ನೇ ದೇವರು ಅಂದುಕೊಂಡಂತಿದೆ: ಬಿಜೆಪಿ ಲೇವಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2022, 7:56 IST
Last Updated 13 ಅಕ್ಟೋಬರ್ 2022, 7:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಜೆಪಿ ನಾಯಕರ ಬಗ್ಗೆ ಭಯ ಇರುವ ಕಾರಣದಿಂದಲೇ ಸಿದ್ದರಾಮಯ್ಯ ಅವರು ಇಳಿ ವಯಸ್ಸಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ‌ವ್ಯಂಗ್ಯವಾಡಿದೆ.

ಭಾರತ್ ಜೋಡೊ ಯಾತ್ರೆಯನ್ನು ಕಂಡು ಬಿಜೆಪಿಗರಿಗೆ ನಡುಕ ಶುರುವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ತಿರುಗೇಟು ನೀಡಿದೆ.

‘ಸಿದ್ದರಾಮಯ್ಯನವರೇ, ಬಿಜೆಪಿ ನಾಯಕರ ಬಗ್ಗೆ ಭಯ ಇರುವ ಕಾರಣದಿಂದಲೇ ಈ ಇಳಿ ವಯಸ್ಸಿನಲ್ಲಿ ಕಷ್ಟವಾದರೂ ಬಲವಂತದ ಪಾದಯಾತ್ರೆ ಮಾಡುತ್ತಿದ್ದೀರಿ. ನೀವು ಮೋರ್ ಸ್ಟ್ರಾಂಗ್ ಅಂತ ಹೇಳಿಕೊಂಡಿದ್ದೀರಿ, ನೀವು ಸ್ಟ್ರಾಂಗ್ ಇದ್ದಿದ್ದರೆ ಸಿಎಂ ಸ್ಥಾನಕ್ಕೆ ಬೀದಿಗೆ ಬಂದು ಇಷ್ಟೊಂದು ಕಸರತ್ತು ಪಡಬೇಕಿರಲಿಲ್ಲ’ ಎಂದು ಬಿಜೆಪಿ ಕಿಚಾಯಿಸಿದೆ.

ADVERTISEMENT

‘ಬೆಳಿಗ್ಗೆ ಎದ್ದ ತಕ್ಷಣ ಎಲ್ಲರೂ ದೇವರನ್ನು ನೆನೆಯುತ್ತಾರೆ. ಆದರೆ, ಬಾಲಕನ (ರಾಹುಲ್ ಗಾಂಧಿ) ಜೊತೆ ಓಡುವ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಜಪ ಮಾಡುತ್ತಿರುವುದನ್ನು ನೋಡಿದರೆ, ಬಿಜೆಪಿ ನಾಯಕರನ್ನೇ ದೇವರು ಅಂದುಕೊಂಡ ಹಾಗಿದೆ’ ಎಂದು ಬಿಜೆಪಿ ಲೇವಡಿ ಮಾಡಿದೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯನ್ನು ಕಂಡು ಬಿಜೆಪಿಗೆ ನಡುಕ ಶುರುವಾಗಿದೆ. ಬಿಜೆಪಿ ನಾಯಕರು ಭಯದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು.

'ನನ್ನನ್ನು ಕಂಡರೆ ಬಿಜೆಪಿ ನಾಯಕರಿಗೆ ಭಯ. ಬಲಶಾಲಿಯಾದವರಿಗೆ ಶತ್ರುಗಳು ಹೆಚ್ಚು. ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ವಿಷಯಾಧಾರಿತ ಚರ್ಚೆಗೆ ಬನ್ನಿ. ವ್ಯಾಪಕವಾಗಿರುವ ಭಷ್ಟಾಚಾರದ ಕುರಿತು ಮಾತನಾಡಿ' ಎಂದು ಬಿಜೆಪಿಗೆ ಸವಾಲು ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.