ADVERTISEMENT

ಯಡಿಯೂರಪ್ಪ ರಾಜಕೀಯ ಅನೈತಿಕತೆಯ ರೂವಾರಿ: ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 6:47 IST
Last Updated 30 ಜುಲೈ 2020, 6:47 IST
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂವಾದ ನಡೆಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂವಾದ ನಡೆಸಿದರು.    

ಮೈಸೂರು: ಯಡಿಯೂರಪ್ಪ ಆಪರೇಷನ್ ಕಮಲ ನಡೆಸುವ ಮೂಲಕ ರಾಜಕೀಯ ಅನೈತಿಕತೆಯ ರೂವಾರಿಯಾಗಿದ್ದು, ಆಕ್ರಮ ಹಣದಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆಯುತ್ತಿರುವ ಸಂವಾದದಲ್ಲಿ ಮಾತನಾಡಿದ ಅವರು, ‘ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಯಾವ ಭರವಸೆ ಈಡೇರಿಸಿದ್ದೀರಿ..? ನಿಮ್ಮ ಸಾಧನೆ ತಿಳಿಸಿ ಸಿಎಂ ಯಡಿಯೂರಪ್ಪನವರೇ’ ಎಂದು ಆಗ್ರಹಿಸಿದರು.

ಇದು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲದ ಅನೈತಿಕ ಸರ್ಕಾರವಾಗಿದೆ. ಜನರ ಆಶೀರ್ವಾದ ನಮಗಿತ್ತು. ಶೇಕಡಾವಾರು ಮತ ನಾವೇ ಹೆಚ್ಚು ಗಳಿಸಿದ್ದು. ಬಹುಮತ ಸಾಬೀತು ಮಾಡಲಾಗದೇ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು ಎಂದು ಹೇಳಿದರು.

ರೈತರ ಸಾಲ ಮನ್ನಾ ಮಾಡದ ರಾಜ್ಯ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ಯಾವೊಂದು ಕಾರ್ಯಕ್ರಮ ರೂಪಿಸಿಲ್ಲ. ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜಾಹುಲಿ ಪ್ರಧಾನಿ ನರೇಂದ್ರ ಮೋದಿ ಬಳಿ ತೆರಳಿ ಪರಿಹಾರ ತರಲು ಯಡಿಯೂರಪ್ಪನವರಿಗೆ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.

ADVERTISEMENT

ಕೋವಿಡ್ ಲಾಕ್‌‌ಡೌನ್ ಸಂದರ್ಭದಲ್ಲಿ ರೈತ, ಜನ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದೆ ಯಡಿಯೂರಪ್ಪ ಸರ್ಕಾರದ ಸಾಧನೆ ಎಂದುಲೇವಡಿ ಮಾಡಿದರು.

‘ಸರ್ಕಾರ ವಿಫಲ’
ಕೊರೊನಾ ವೈರಸ್ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ನವದೆಹಲಿ, ಮಹಾರಾಷ್ಟ್ರದಲ್ಲಿ ಆಗಿದ್ದು ನಮ್ಮಲ್ಲಿ ಏಕೆ ಆಗುತ್ತಿಲ್ಲ. ಕೋಟಿ ಕೋಟಿ ಖರ್ಚು ತಪ್ಪಿಲ್ಲ. ಲೆಕ್ಕ ಕೇಳಿದರೆ ಕೊಡುವುದಿಲ್ಲ. ಪ್ರಶ್ನಿಸಿದರೆ ಸಹಕಾರ ಕೊಡುತ್ತಿಲ್ಲ ಎಂದು ವಿರೋಧ ಪಕ್ಷಗಳ ವಿರೋಧ ಟೀಕಿಸುತ್ತಾರೆ. ಸೂತಕದ ಮನೆಯಲ್ಲಿ ಸಂಭ್ರಮಾಚರಣೆ ಅವಶ್ಯಕತೆ ಇದೆಯಾ. ಈ ಸಂದರ್ಭದಲ್ಲಿ ದುಡ್ಡು ಹೊಡೆಯಬೇಕಿತ್ತಾ? ಕೋಟಿ, ಕೋಟಿ ಎಲ್ಲಿಗೋಗ್ತಿದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.