ADVERTISEMENT

ಸರ್ಕಾರ ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟು, ಸುಳ್ಳು ಹೇಳಿದೆ: ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 12:50 IST
Last Updated 29 ಏಪ್ರಿಲ್ 2021, 12:50 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾದಿಂದಾಗಿ ಸಾವಿಗೀಡಾದವರ ಸಂಖ್ಯೆಯ ನಿಜ ಲೆಕ್ಕವನ್ನು ಮುಚ್ಚಿಟ್ಟು, ಜನರಿಗೆ ಸುಳ್ಳು ಹೇಳುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು, ‘ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಬಿಡುಗಡೆ ಮಾಡುವ ಮೃತರ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಬಿಜೆಪಿ ಸರ್ಕಾರ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಿದ್ದರೆ ಜನ ಹೀಗೆ ಸಾಯುವ ಸನ್ನಿವೇಶ ಬರುತ್ತಿತ್ತಾ?’ ಎಂದು ಪ್ರಶ್ನಿಸಿದ್ದಾರೆ.

‘ಕೋವಿಡ್‌ ರೋಗಿಗಳಿಗೆ ಆಕ್ಸಿಜನ್, ಐಸಿಯು ಹಾಸಿಗೆಗಳು, ಆಂಬುಲೆನ್ಸ್‌ಗಳು ಅಗತ್ಯ ಸಮಯದಲ್ಲಿ ಸಿಗುತ್ತಿಲ್ಲ ಎಂದು ಸತ್ಯ ಹೇಳಿದರೆ ಬಿಜೆಪಿ ನಾಯಕರು ನಾನು ಟೀಕೆ ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ. ಶವ ಸಂಸ್ಕಾರ ಮಾಡಲು ಕ್ಯೂನಲ್ಲಿ ನಿಲ್ಲಬೇಕಾದ, ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಇದು ಸುಳ್ಳಾ? ಇದನ್ನು ಹೇಳಿದ್ರೆ ಟೀಕೆಯಾಗುತ್ತಾ? ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT

‘ಬಡ ರೈತನೊಬ್ಬನಿಗೆ ‘ಹೊಟ್ಟೆಗಿಲ್ಲದಿದ್ದರೆ ಸಾಯೋದೆ ಒಳ್ಳೆಯದು’ ಎಂಬ ಉಡಾಫೆ ಉತ್ತರ ನೀಡಿರುವ ಉಮೇಶ್ ಕತ್ತಿ ಅವರು ಸಚಿವನಾಗಿ ಮುಂದುವರೆಯಲು ನಾಲಾಯಕ್. ಕತ್ತಿ ಪರವಾಗಿ ಸಿಎಂ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸುವ ಬದಲು ಮಂತ್ರಿ ಮಂಡಲದಿಂದ ಕೈಬಿಡಬೇಕಿತ್ತು. ಇಂತಹ ಅಯೋಗ್ಯರನ್ನು ಇಟ್ಟುಕೊಂಡು ಸರ್ಕಾರ ಬಡವರ ಪರವಾಗಿ ಕೆಲಸ ಮಾಡಲು ಆಗುತ್ತಾ? ಎಂದು ಟೀಕಿಸಿದ್ದಾರೆ.

‘ಲಾಕ್‌ಡೌನ್‌ನಿಂದಾಗಿ ಜನ ಕೆಲಸ ಇಲ್ಲದೆ ಮನೆಯಲ್ಲಿ ಕೂತಿದ್ದಾರೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಅವರ ಬಳಿ ಹಣವಿಲ್ಲ. ಹಾಗಾಗಿ ರಾಜ್ಯ ಬಿಜೆಪಿ ಸರ್ಕಾರ ಪ್ರತೀ ವ್ಯಕ್ತಿಗೆ ತಲಾ ಹತ್ತು ಕೆ.ಜಿ ಅಕ್ಕಿ ಸೇರಿದಂತೆ ಅಗತ್ಯ ದಿನಸಿ ವಸ್ತುಗಳನ್ನು ತಕ್ಷಣ ವಿತರಿಸಬೇಕು ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.