ADVERTISEMENT

ರಾಹುಲ್‌ ಗಾಂಧಿ ಸಲಹೆಗಾರ ರಾಜು –ಸಿದ್ದರಾಮಯ್ಯ ಭೇಟಿ: ಕಾಂಗ್ರೆಸ್‌ನಲ್ಲಿ ಕುತೂಹಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 8:08 IST
Last Updated 6 ಫೆಬ್ರುವರಿ 2022, 8:08 IST
ಸಿದ್ದರಾಮಯ್ಯ ಅವರೊಂದಿಗೆ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರ ಸಲಹೆಗಾರ ಕೆ.ರಾಜು ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಅವರೊಂದಿಗೆ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರ ಸಲಹೆಗಾರ ಕೆ.ರಾಜು ಮಾತುಕತೆ ನಡೆಸಿದರು.   

ಬೆಂಗಳೂರು: ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರ ಸಲಹೆಗಾರ ಕೆ.ರಾಜು ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಶಾಸಕ ಜಮೀರ್ ಅಹಮದ್ ಕೂಡಾ ಜೊತೆಗೆ ಇದ್ದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ರಾಜು ಅವರಿಗೆ ಪಕ್ಷದ ಡಿಜಿಟಲ್ ಸದಸ್ಯತ್ವದ ನೋಂದಣಿಯ ಜವಾಬ್ದಾರಿ ನೀಡಲಾಗಿದೆ. ಅವರು ಎಲ್ಲ ರಾಜ್ಯಗಳಿಗೆ ಭೇಟಿ ಕೊಡುತ್ತಿದ್ದಾರೆ‌. ಅದೇ ರೀತಿ ಬೆಂಗಳೂರಿಗೆ ಬಂದಿದ್ದರು. ಅದರಲ್ಲಿ ವಿಶೇಷ ಇಲ್ಲ’ ಎಂದರು.

ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಕನಸು ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ‘ಯಾರು ಕುಮಾರಸ್ವಾಮಿ?’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ಓ.. ಆ ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ. ನಾನು ಹಿಜಾಬ್ ಬಗ್ಗೆ ಮಾತನಾಡಿದ್ದು ನಿಜ. ಆದರೆ, ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ’ ಎಂದರು.

ADVERTISEMENT

‘ಅವರು (ಕುಮಾರಸ್ವಾಮಿ) ಯಾರು ನನ್ನ ಬಗ್ಗೆ ಮಾತನಾಡಲು. ಅವರು ರಾಜಕೀಯ ಪಕ್ಷದ ನಾಯಕರು. ನಾನು ಅವರ ಬಗ್ಗೆ ಮಾತನಾಡಲ್ಲ. ನಾನ್ಯಾಕೆ ಅವರ ಬಗ್ಗೆ ಮಾತನಾಡಲಿ’ ಎಂದರು.

ಪಕ್ಷದ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಅಸಮಾಧಾನ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಇಬ್ರಾಹಿಂ ಪಕ್ಷ ಬಿಡಲ್ಲ. ಅವರು ಏನಾದರು ಮಾಡಲಿ. ಅದಕ್ಕೆ ಸಂಬಂಧ ಇಲ್ಲ. ಅವರು ಪಕ್ಷ ಬಿಡಲ್ಲ’ ಎಂದರು.

‘ಇಬ್ರಾಹಿಂ ಜೊತೆ ಮಹದೇವಪ್ಪ ಮಾತಾಡಿದ್ದಾರೆ. ಕೋಪ ಕಡಿಮೆ ಆಗಲಿ. ಆ ಮೇಲೆ ನಾನು ಭೇಟಿ ಮಾಡ್ತೇನೆ. ವಿರೋಧ ಪಕ್ಷದ ನಾಯಕ ಸ್ಥಾನ ಸಿಕ್ಕಿಲ್ಲ ಎಂದು ಕೋಪ ಇರುತ್ತದೆ. ವೀರೇಂದ್ರ ಪಾಟೀಲ್ ಜೊತೆ ಕಾಂಗ್ರೆಸ್ ಜೊತೆ ಹೋಗಿದ್ದ. ಆ ಮೇಲೆ ನನ್ನ ಜೊತೆ ಕಾಂಗ್ರೆಸ್‌ಗೆ ಬಂದ’ ಎಂದೂ ಇಬ್ರಾಹಿಂ ಜೊತೆಗಿನ ಒಡನಾಟವನ್ನು ಸಿದ್ದರಾಮಯ್ಯ ನೆನಪಿಸಿದರು.

ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿದ ಜಮೀರ್ ಅಹಮದ್‌, ‘ಕುಮಾರಸ್ವಾಮಿಗೆ ಯಾವ ಹುಚ್ಚು ಇರುವುದು? ಸಿಎಂ ಆಗಬೇಕು ಎಂದು ತಾನೆ? ಅವರೇನೂ ಜನಸೇವೆ ಮಾಡಬೇಕು ಎಂದು ಇದೆಯಾ? ಅವರಿಗೂ ಸಿಎಂ ಆಗಬೇಕು‌ ಅಂತಾಲೇ ಹುಚ್ಚು ಇರುವುದು. ಎಲ್ಲರಿಗೂ ಸಿಎಂ ಆಗಬೇಕು ಅನ್ನೋ ಹುಚ್ಚು ಇರುತ್ತದೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.