ADVERTISEMENT

ಸಿದ್ದರಾಮಯ್ಯ ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ ಮಜಾವಾದಿ ರಾಜಕಾರಣಿ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮೇ 2022, 10:21 IST
Last Updated 8 ಮೇ 2022, 10:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ ಮಜಾವಾದಿ ರಾಜಕಾರಣಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಹೈಕಮಾಂಡ್‌ಗೆ ನೀಡಿದ ಕಪ್ಪವನ್ನು ಡೈರಿಯಲ್ಲಿ ಬರೆದಿಟ್ಟ ನೀವು (ಸಿದ್ದರಾಮಯ್ಯ) ಈಗ ಸತ್ಯ ಹರಿಶ್ಚಂದ್ರನಂತೆ ವರ್ತಿಸಿದರೆ ನಂಬಲು ಸಾಧ್ಯವೇ’ ಎಂದು ಪ್ರಶ್ನಿಸಿದೆ.

ಸಿದ್ದರಾಮಯ್ಯ ಅವರೇ, ನ್ಯಾಶನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಗಾಂಧಿ ಅವರ ರಾಜೀನಾಮೆ ಕೇಳುವ ತಾಕತ್ತಿದೆಯೇ?, ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಡೆ ಇರುವ ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸುವ ತಾಕತ್ತಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

ADVERTISEMENT

ಸಿದ್ದರಾಮಯ್ಯ ಅವರೇ, ಲಕ್ಷಾಂತರ ಮೌಲ್ಯದ ವಾಚ್‌ ಹಗರಣ ಆದಾಗ ನಿಮ್ಮ ಮಾನ ಮಾರ್ಯಾದೆ ಎಲ್ಲಿತ್ತು?, ಅರ್ಕಾವತಿ ರೀಡೂ ಪ್ರಕರಣದಲ್ಲಿ ನಿಮ್ಮ ಮಾನ ಮರ್ಯಾದೆ ಎತ್ತರಕ್ಕೇರಿತ್ತೇ?, ಜೈಲಿನಿಂದ ಬಂದವರನ್ನು ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ಮಾಡುವಾಗ ನಿಮ್ಮ ಮಾನ ಮರ್ಯಾದೆ ಎಲ್ಲಿತ್ತು ಎಂದು ಬಿಜೆಪಿ ಟೀಕಿಸಿದೆ.

ಮುಖ್ಯಮಂತ್ರಿ ಸ್ಥಾನ ನೀಡಲು ₹2,500 ಕೋಟಿ ಹಣ ಕೇಳಿದ್ದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿದ್ದ ಹೇಳಿಕೆ ಹಾಗೂ ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಸ್ತಾಪಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದಿಂದ ವಿರುದ್ಧ ಕಿಡಿಕಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.