ADVERTISEMENT

ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆ: ಭಾವುಕರಾಗಿ ಕಣ್ಣೀರು ಹಾಕಿದ ಯಡಿಯೂರಪ್ಪ

ಮಂತ್ರಿ ಮಂಡಲ ರಚನೆಗೂ ಅವಕಾಶ ನೀಡಲಿಲ್ಲ* ಪ್ರವಾಹದ ಸಂದರ್ಭದಲ್ಲಿ ಹುಚ್ಚನಂತೆ ತಿರುಗಾಡಿದೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 11:39 IST
Last Updated 26 ಜುಲೈ 2021, 11:39 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ‘ಎರಡು ವರ್ಷವೂ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆಗಳು ಎದುರಾಯಿತು. ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರೂ ಸಂಪುಟ ವಿಸ್ತರಣೆಗೆ ವರಿಷ್ಠರು ಅವಕಾಶ ನೀಡಲಿಲ್ಲ. ಪ್ರವಾಹ ಬಂದಿತ್ತು ಒಬ್ಬನೇ ಹುಚ್ಚನಂತೆ ರಾಜ್ಯವಿಡೀ ತಿರುಗಾಡಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾವುಕರಾಗಿ ಕಣ್ಣೀರು ಹಾಕಿದರು.

ವಿಧಾನಸೌಧದ ಬಾಂಕ್ವೆಟ್‌ಹಾಲ್‌ನಲ್ಲಿ ಸೋಮವಾರ ನಡೆದ ಸರ್ಕಾರದ ಎರಡು ವರ್ಷದ ಸಾಧನೆಯ ಸಮಾರಂಭ ಯಡಿಯೂರಪ್ಪ ಅವರ ವಿದಾಯದ ಭಾಷಣವಾಗಿತ್ತು. ತಮ್ಮ ಸುದೀರ್ಘ ರಾಜಕೀಯ ಜೀವನದ ಚಿತ್ರಣವನ್ನು ಜನತೆಯ ಮುಂದಿಟ್ಟರು. ಮಾತನಾಡುವಾಗ ಹಲವು ಸಂದರ್ಭಗಳಲ್ಲಿ ಅವರು ಗದ್ಗದಿತರಾದರು, ಕಣ್ಣಲ್ಲಿ ನೀರು ಜಿನುಗಿತು. ಒಂದೆರಡು ಬಾರಿ ಮಾತೇ ಹೊರಡದಂತಾಗಿ ತಡವರಿಸಿದರು.

ಪ್ರವಾಹದ ಅಬ್ಬರ ಮುಗಿಯುತ್ತಿದ್ದಂತೆ ಕೋವಿಡ್‌ ಬಂದಿತು. ಒಂದೂವರೆ ವರ್ಷದಿಂದ ಅದರ ವಿರುದ್ಧ ಶಕ್ತಿ ಮೀರಿ ಹೋರಾಟ ಮಾಡಿದ್ದೇವೆ. ಇಡೀ ದೇಶದಲ್ಲಿ ಕೋವಿಡ್‌ ತಡೆಗಟ್ಟುವಲ್ಲಿ ಕರ್ನಾಟಕ ಯಶಸ್ವಿಯಾಯಿತು ಎಂಬ ಮಾತನ್ನು ಕೇಂದ್ರ ಸರ್ಕಾರ ಹೇಳಿತು. ಅಗ್ನಿ ಪರೀಕ್ಷೆಗಳ ಮಧ್ಯೆಯೂ ನಮ್ಮ ಇತಿ ಮಿತಿಯಲ್ಲಿ ರಾಜ್ಯದ ಜನರಿಗಾಗಿ ಕೆಲಸ ಮಾಡಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

ADVERTISEMENT

ಶಿಕಾರಿಪುರದ ದಿನಗಳಲ್ಲಿ ಒಂದು ಹೋರಾಟ ನಡೆಸಲು 50 ಜನ ಸಿಗದ ಕಾಲದಿಂದಲೂ ಹೋರಾಟ ನಡೆಸಿಕೊಂಡು ಬಂದೆ. ಶಿವಮೊಗ್ಗ, ಶಿಕಾರಿಪುರ, ಬನವಾಸಿ ಹೀಗೆ ಎಲ್ಲ ಕಡೆ ಪಕ್ಷವನ್ನು ಬಲಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆವು. ವಿಧಾನಸಭೆಯಲ್ಲಿ ನಾನು ಮತ್ತು ವಸಂತ ಬಂಗೇರ ಆಯ್ಕೆ ಆಗಿ ಬಂದಾಗ ಇದ್ದದ್ದು ಇಬ್ಬರೇ. ಬಂಗೇರ ಪಕ್ಷ ಬಿಟ್ಟರು. ಆದರೆ ನಾನು ಪಕ್ಷ ಬಿಡಲಿಲ್ಲ. ಬೇರೆ ಯಾವುದೇ ಯೋಚನೆ ಮಾಡದೇ ಒಬ್ಬನೇ ವಿಧಾನಸಭೆಯಲ್ಲಿ ಹೋರಾಟ ನಡೆಸಿಕೊಂಡು ಬಂದೆ ಎಂದು ನೆನಪಿನ ಸುರುಳಿ ಬಿಚ್ಚಿದರು.

ಆಗಿನಿಂದಲೂ ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದೆ ಎಂಬ ತೃಪ್ತಿ, ವಿಶ್ವಾಸ ಮತ್ತು ಸಮಾಧಾನ ನನಗಿದೆ. ಮಂಡ್ಯ ಜಿಲ್ಲೆ ಬೂಕನಕೆರೆಯಲ್ಲಿ ಹುಟ್ಟಿದರೂ ಶಿಕಾರಿಪುರಕ್ಕೆ ಹೋದೆ. ಆರ್‌ಎಸ್‌ಎಸ್‌ ಪ್ರಚಾರಕನಾಗಿ ಕೆಲಸ ಮಾಡಿದೆ. ಪುರಸಭೆ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದೆ. ಒಮ್ಮೆ ದಾರಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಯಿತು. ಬದುಕಿದರೆ, ಜನರ ಸೇವೆಗೆ ನನ್ನ ಜೀವನ ಮೀಸಲಿಡಬೇಕು ಎಂಬ ಭಾವನೆ ಬಂದಿತು. ಅದೇ ರೀತಿ ನಡೆದುಕೊಂಡೆ ಎಂಬ ತೃಪ್ತಿ ಇದೆ ಎಂದು ಹೇಳಿದರು.

ದಲಿತ ಮತ್ತು ರೈತರ ಹೋರಾಟಗಳನ್ನು ನಡೆಸಿದೆ. ಒಮ್ಮೆ ಶಿವಮೊಗ್ಗದಲ್ಲಿ 50 ಸಾವಿರಕ್ಕೂ ಹೆಚ್ಚು ರೈತರ ಸಮಾವೇಶ ಆಯೋಜಿಸಿದ್ದೆ. ಆಗ ರಾಜನಾಥಸಿಂಗ್‌ ಬಂದಿದ್ದರು. ಮತ್ತೊಮ್ಮೆ ಮಹಿಳಾ ಸಮಾವೇಶ ಮಾಡಿದಾಗ 50 ಸಾವಿರಕ್ಕೂ ಹೆಚ್ಚು ಮಹಿಳೆಯರು ಸೇರಿದ್ದರು. ಅಲ್ಲಿಗೆ ಸುಷ್ಮಾಸ್ವರಾಜ್‌ ಅವರು ಬಂದಿದ್ದರು. ಆ ಸಂದರ್ಭದಲ್ಲಿ ಇಬ್ಬರೂ ಅಚ್ಚರಿ ವ್ಯಕ್ತಪಡಿಸಿದರು. ಅಂತಹ ಹೋರಾಟ ಮತ್ತು ಸಂಘಟನೆಯ ಪರಿಣಾಮ ಇಂದು ನಾವು ಇಲ್ಲಿ ಇದ್ದೇವೆ ಎಂದು ಸೂಚ್ಯವಾಗಿ ಹೇಳಿದರು.

ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಚನೆ ಆದಾಗ ಮಂತ್ರಿ ಆಗಲು ಬನ್ನಿ ಎಂದು ಆಹ್ವಾನ ನೀಡಿದರು. ಕರ್ನಾಟಕದಲ್ಲಿ ಪಕ್ಷ ಕಟ್ಟಲು ಬಿಡಿ. ನಾನು ದೆಹಲಿಗೆ ಬರುವುದಿಲ್ಲ ಎಂದು ಹೇಳಿದೆ. ಅಟಲ್‌ ಆಡ್ವಾಣಿ, ಮುರುಳಿ ಮನೋಹರ ಜೋಷಿ ಅಂತಹವರು ಇದ್ದರು ಎಂದು ಹೇಳುವಾಗ ಅವರಿಗೆ ದುಃಖ ಉಮ್ಮಳಿಸಿ ಬಂದಿತು.

ಅಟಲ್ – ಆಡ್ವಾಣಿ ಬಂದಾಗ 200 ರಿಂದ 300 ಜನ ಸೇರಿಸುವುದು ಕಷ್ಟ ಆಗುತ್ತಿತ್ತು. ಛಲ ಬಿಡದೇ ಅವರನ್ನು ಕರೆದುಕೊಂಡು ರಾಜ್ಯದ ಉದ್ದಗಲ ಓಡಾಟ ಮಾಡಿದೆ. ಕರ್ನಾಟಕದಲ್ಲಿ 2 ಇದ್ದಿದ್ದು ನಾಲ್ಕು ಆಯಿತು. ಹಾಗೇ ನಾವೆಲ್ಲೂ ಸೇರಿ ಪಕ್ಷವನ್ನು ಕಟ್ಟಿದೆವು. ಕರ್ನಾಟಕದಲ್ಲಿ ಅಧಿಕಾರ ಹಿಡಿದೆವು. ಹಣ ಬಲ, ಹೆಂಡದ ಬಲ ಮತ್ತು ತೋಳ್ಬಲ ಎದುರಿಸಿದೆವು. ಜನ ನಮ್ಮ ಕೈಬಿಡಲಿಲ್ಲ. ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಇದು ಸಾಧ್ಯವಾಯಿತು ಎಂದು ಯಡಿಯೂರಪ್ಪ ಹೇಳಿದರು.

ಕಾರು ಇಲ್ಲದೆ ಸೈಕಲ್‌ನಲ್ಲಿ ಓಡಾಡಿ ಪಕ್ಷವನ್ನು ಕಟ್ಟಿದೆವು. ಅವೆಲ್ಲ ನೆನಪಿಸಿಕೊಂಡರೆ ನಗು ಮತ್ತು ಆಶ್ಚರ್ಯವೂ ಆಗುತ್ತದೆ. ಯಾರೂ ಇಲ್ಲದಾಗ ಪಾರ್ಟಿ ಕಟ್ಟಿದ್ದು. ಇದೀಗ ದೇಶದಅತಿ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದು ಯಡಿಯೂರಪ್ಪ ಸಂತಸದಿಂದ ನಕ್ಕರು.

ಜನರಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬಗ್ಗೆ ವಿಶ್ವಾಸ ಕಡಿಮೆ ಆಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ದೇಶ ಮತ್ತು ರಾಜ್ಯವನ್ನು ಮುಂದಕ್ಕೆ ಒಯ್ಯಬೇಕು ಎಂಬ ಅಪೇಕ್ಷೆ ಮೋದಿ ಅವರದ್ದಾಗಿದೆ.

ಮೋದಿ–ಷಾ ವಾತ್ಸಲ್ಯವಿತ್ತು

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ‍ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ನನ್ನ ಮೇಲೆ ವಾತ್ಸಲ್ಯವಿದೆ. ಆದ ಕಾರಣ 75 ವರ್ಷ ಮೀರಿದ್ದರೂ 2 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ನೀಡಿದರು ಎಂದು ಭಾವುಕರಾಗಿ ನುಡಿದರು.

ಮತ್ತೊಮ್ಮೆ ಮೋದಿ ಮತ್ತು ಷಾ ಜೋಡಿ ಗೆದ್ದು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ದೇಶವನ್ನು ಇನ್ನಷ್ಟು ಪ್ರಬಲಗೊಳಿಸಬೇಕು.

ಸಂತೋಷದಿಂದ ರಾಜೀನಾಮೆ

ತಮ್ಮ ಭಾಷಣ ಕೊನೆಯಲ್ಲಿ ರಾಜೀನಾಮೆ ನೀಡುವ ಪ್ರಸ್ತಾಪ ಮಾಡಿದರು. ‘ಅನ್ಯಥಾ ಭಾವಿಸಬಾರದು. ನಾನು ತಮ್ಮೆಲ್ಲರ ಅಪ್ಪಣೆ ಪಡೆದು....ತೀರ್ಮಾನ ಮಾಡಿದ್ದೇನೆ. ಎಲ್ಲರೂ ಊಟ ಮಾಡಿದ ನಂತರ ರಾಜಭವನಕ್ಕೆ ಹೋಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲು ತೀರ್ಮಾನ ಮಾಡಿದ್ದೇನೆ’ ಎಂದು ದುಃಖಿತರಾದರು. ಕಣ್ಣಲ್ಲಿ ಮತ್ತೊಮ್ಮೆ ನೀರು ಬಂದಿತ್ತು.

‘ದುಃಖದಿಂದ ಅಲ್ಲ, ಸಂತೋಷದಿಂದ– ಖುಷಿಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಮುಖ್ಯಮಂತ್ರಿ ಆಗಿ ಕೆಲಸ ಮಾಡಲು ಅವಕಾಶ ಕೊಟ್ಟ ಮೋದಿ,ಷಾ, ನಡ್ಡಾ ಅವರಿಗೆ ಶಬ್ದಗಳಲ್ಲಿ ಅಭಿನಂದನೆ ಸಲ್ಲಿಸಲು ಆಗುವುದಿಲ್ಲ. ಅವರಿಗೆ ಋಣಿ ಆಗಿದ್ದೇನೆ’ ಎಂದರು.

ಜನರಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬಗ್ಗೆ ವಿಶ್ವಾಸ ಕಡಿಮೆ ಆಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ದೇಶ ಮತ್ತು ರಾಜ್ಯವನ್ನು ಮುಂದಕ್ಕೆ ಒಯ್ಯಬೇಕು ಎಂಬ ಅಪೇಕ್ಷೆ ಮೋದಿ ಅವರದ್ದಾಗಿದೆ.

ಎಲ್ಲ ಅಡೆತಡೆಗಳ ಮಧ್ಯೆಯೂ ನಾವು ಶಕ್ತಿ ಮೀರಿ ಕೆಲಸ ಮಾಡಿದ್ದೇವೆ. ಇದಕ್ಕಾಗಿ ಶಾಸಕರು, ಸಚಿವರು, ಸರ್ಕಾರಿ ಅಧಿಕಾರಿಗಳಿಗೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ತೆರಿಗೆ ಸಂಗ್ರಹ ಸಂಪೂರ್ಣ ನಿಂತು ಹೋಯಿತು. ವ್ಯಾಪಾರ ವಹಿವಾಟು ಬಂದ್‌ ಆಯಿತು. ಆದರೂ ಅಭಿವೃದ್ಧಿ ಕಾರ್ಯ ನಿಲ್ಲಲಿಲ್ಲ. ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕೆಲಸ ನಡೆಯಿತು. ಸಾಕಷ್ಟು ಪ್ರಾಮಾಣಿಕ ಅಧಿಕಾರಿಗಳ ಪರಿಶ್ರಮದಿಂದ ಬೆಂಗಳೂರು ಮಾದರಿ ನಗರ ಮಾಡುವ ಪ್ರಯತ್ನ ನಡೆದಿದೆ ಎಂದರು.

ಬಿಎಸ್‌ವೈ ಅವರ ಕಡೇ ಘೋಷಣೆ

ಒಲಿಂಪಿಕ್‌ಗೆ ರಾಜ್ಯದಿಂದ ಹೋಗಿರುವ ಕ್ರೀಡಾಳುಗಳು ಪದಕ ಗೆದ್ದರೆ ಬಹುಮಾನ ನೀಡುವಾಗಿ ಯಡಿಯೂರಪ್ಪ ಪ್ರಕಟಿಸಿದರು. ಚಿನ್ನದ ಪದಕ ಗೆದ್ದರೆ ₹5 ಕೋಟಿ, ಬೆಳ್ಳಿ ₹3 ಕೋಟಿ ಮತ್ತು ಕಂಚಿನ ಪದಕ ಗೆದ್ದರೆ ₹2 ಕೋಟಿ ಬಹುಮಾನ ನೀಡಲಾಗುವುದು. ಇತರ ರಾಜ್ಯದ ಕ್ರೀಡಾಳುಗಳು ಚಿನ್ನದ ಪದಕ ಗೆದ್ದರೆ ₹15 ಲಕ್ಷ, ಬೆಳ್ಳಿಗೆ ₹10 ಲಕ್ಷ ಮತ್ತು ಕಂಚಿನ ಪದಕ ಗೆದ್ದರೆ ₹5 ಲಕ್ಷ ನೀಡುವುದಾಗಿ ಘೋಷಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.