ವಿಜಯೇಂದ್ರ
– ಪ್ರಜಾವಾಣಿ ಚಿತ್ರಗಳು
ಬೆಂಗಳೂರು: ರಾಜ್ಯದಲ್ಲಿ ಸೆರೆಮನೆಗಳು ಉಗ್ರಗಾಮಿಗಳಿಗೆ, ರೇಪಿಸ್ಟ್‌ಗಳಿಗೆ ಅರಮನೆಗಳ ರೀತಿಯಾಗಿವೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಮದ್ಯ, ಸ್ಮಾರ್ಟ್‌ಫೋನ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಆರೋಪಿಗಳಿಗೆ ಲಭ್ಯವಾಗುವುದಾದರೆ ಅವರನ್ನು ಜೈಲಿನಲ್ಲಿ ಇರಿಸಿದ್ದು ಏಕೆ? ಎಂದು ಪ್ರಶ್ನಿಸಿದೆ.
ರಾಜ್ಯ ಸರ್ಕಾರಕ್ಕೆ ಸೆರೆಮನೆ, ಅರಮನೆ ಯಾವುದರಲ್ಲೂ ನಿಯಂತ್ರಣವಿಲ್ಲ. ನ್ಯಾಯಾಲಯಗಳು, ಶಿಕ್ಷೆ ವಿಧಿಸಿ ಜೈಲಿಗೆ ಹಾಕುವುದು ಮನಃಪರಿವರ್ತನೆಗಾಗಿ ಎನ್ನುವುದು ಇಲ್ಲಿ ಸುಳ್ಳಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಐಸಿಸ್ ಉಗ್ರಗಾಮಿಯಿಂದ ಹಿಡಿದು, ಸರಣಿ ರೇಪಿಸ್ಟ್‌ಗಳವರೆಗೂ ರಾಜ್ಯದ ಬಂಧಿಖಾನೆಯಲ್ಲಿ ಸ್ವಚ್ಛಂದವಾಗಿ ಜೀವನ ನಡೆಸುತ್ತಿದ್ದಾರೆ. ಮದ್ಯ, ಸ್ಮಾರ್ಟ್‌ಫೋನ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಆರೋಪಿಗಳಿಗೆ ಲಭ್ಯವಾಗುವುದಾದರೆ ಅವರನ್ನು ಜೈಲಿನಲ್ಲಿ ಇರಿಸಿದ್ದು ಏಕೆ? ಎಂದು ಪ್ರಶ್ನಿಸಿದೆ.
ಇಬ್ಬರ ತಲೆದಂಡ, ಮುಖ್ಯ ಅಧೀಕ್ಷಕ ಎತ್ತಂಗಡಿ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮೊಬೈಲ್ ಬಳಕೆ, ವಿಶೇಷ ಆತಿಥ್ಯ ಪ್ರಕರಣದಲ್ಲಿ ಜೈಲಿನ ಇಬ್ಬರು ಅಧಿಕಾರಿಗಳನ್ನು ತಲೆದಂಡ ಮಾಡಲಾಗಿದೆ. ಮುಖ್ಯ ಅಧೀಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಗೃಹ ಇಲಾಖೆ ಆದೇಶಿಸಿದೆ.
ಕಾರಾಗೃಹದ ಅಧೀಕ್ಷಕ ಮ್ಯಾಗೇರಿ, ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿ ಅವರನ್ನು ಅಮಾನತು ಮಾಡಲಾಗಿದ್ದು, ಕಾರಾಗೃಹದ ಮುಖ್ಯ ಅಧೀಕ್ಷಕರು ಕೆ.ಸುರೇಶ್ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಅತ್ಯಾಚಾರ ಎಸಗಿ ಸರಣಿ ಕೊಲೆ ನಡೆಸಿರುವ ಪಾತಕಿ ಉಮೇಶ್ ರೆಡ್ಡಿ, ಲಷ್ಕರ್–ಎ– ತಯಬಾ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಆರೋಪಿ ತರುಣ್ ರಾಜ್, ತಾವಿರುವ ಬ್ಯಾರಕ್‌ನಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತಿರುವ, ಬ್ಯಾರಕ್ ಒಳಗೆ ಎಲ್.ಇ.ಡಿ ಟಿ.ವಿ ವೀಕ್ಷಣೆ ಮಾಡುತ್ತಿರುವ ವಿಡಿಯೊಗಳು ಹರಿದಾಡಿದ್ದವು.
ಈ ವಿಡಿಯೊಗಳು ಬಹಿರಂಗವಾದ ಬೆನ್ನಲ್ಲೇ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕ ಬಿ.ದಯಾನಂದ ಅವರು ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಅಲ್ಲದೇ ಗೃಹ ಸಚಿವ ಜಿ.ಪರಮೇಶ್ವರ ಅವರು ಕಾರಾಗೃಹಗಳ ಹಾಗೂ ಸುಧಾರಣಾ ಇಲಾಖೆಯ ಅಧಿಕಾರಿಗಳ ಜತೆಗೆ ಸೋಮವಾರ ಸಭೆ ನಡೆಸಿದ್ದಾರೆ. ಪ್ರಕರಣದ ತನಿಖೆಗೆ ಉನ್ನತಮಟ್ಟದ ಸಮಿತಿ ರಚಿಸುವುದಾಗಿ ಗೃಹ ಸಚಿವರು ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.