
ವಿಧಾನಸೌಧ
ಬೆಂಗಳೂರು: ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳ ಪರಿಷ್ಕರಣೆಗೆ ಸಮಿತಿ ರಚಿಸಲು ರಾಜ್ಯ ಸರ್ಕಾರ ಸೂಚಿಸಿದ್ದು, ಆಸ್ತಿ ಖರೀದಿ ಮತ್ತು ಮಾರಾಟ ದರಗಳು ತುಟ್ಟಿಯಾಗುವ ಸಾಧ್ಯತೆ ಇದೆ.
ಸ್ಥಿರಾಸ್ತಿ ಮೌಲ್ಯ ಪರಿಷ್ಕರಣೆಗೆ ಶಿಫಾರಸು ಮಾಡಲು ಸಮಿತಿ ರಚಿಸುವಂತೆ ರಾಜ್ಯ ಸರ್ಕಾರ ರಾಜ್ಯ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಿಗೆ ಸೂಚಿಸಿದೆ. ಸರ್ಕಾರದ ಮೂಲಗಳ ಪ್ರಕಾರ ಕಟ್ಟಡ, ಜಮೀನು, ನಿವೇಶನಗಳ ಮಾರ್ಗಸೂಚಿ ದರವನ್ನು ಶೇ 10ರಿಂದ 15ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.
ಪ್ರತಿವರ್ಷ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸುವ ಪರಿಪಾಟ ಇದೆ. ಈ ಉದ್ದೇಶಕ್ಕಾಗಿ, ಜನವರಿಯಲ್ಲೇ ಸಮಿತಿ ರಚಿಸಲಾಗುತ್ತಿತ್ತು. ಆದರೆ, ಕಳೆದ ಸಾಲಿನಲ್ಲಿ ಈ ಪ್ರಕ್ರಿಯೆಯನ್ನು ಸರ್ಕಾರ ನಡೆಸಿರಲಿಲ್ಲ. ಆದರೆ, ಸ್ಥಿರಾಸ್ತಿಗಳ ಮೇಲಿನ ವ್ಯವಹಾರಗಳ ದಸ್ತಾವೇಜುಗಳ ನೋಂದಣಿ ಶುಲ್ಕವನ್ನು ಶೇ 1ರಿಂದ ಶೇ 2ಕ್ಕೆ ಏರಿಸಲಾಗಿತ್ತು. ಇದರಿಂದ ಖರೀದಿದಾರರು ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ 7.6ರಷ್ಟನ್ನು ನೋಂದಣಿ ವೇಳೆ ಭರಿಸುತ್ತಿದ್ದಾರೆ.
ಎರಡು ವರ್ಷಗಳ ಹಿಂದೆ ಮಾರುಕಟ್ಟೆ ದರವನ್ನೇ ಆಧಾರವಾಗಿಟ್ಟುಕೊಂಡು ಮಾರ್ಗಸೂಚಿ ದರವನ್ನು ಶೇ 30ರಿಂದ 50ರಷ್ಟು ಹೆಚ್ಚಿಸಲಾಗಿತ್ತು. ವರ್ಷದ ಹಿಂದೆ ದತ್ತು, ಅಡಮಾನ, ಹಸ್ತಾಂತರ ಪ್ರಮಾಣಪತ್ರ, ಒಪ್ಪಂದ ಪತ್ರಗಳು, ಸಾಲದ ಕರಾರು ಸೇರಿದಂತೆ 54 ನೋಂದಣಿಯೇತರ ದಾಖಲೆಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.