ADVERTISEMENT

ಅಂತರ್ಜಲ ಬಳಕೆಗೆ ಮೀಟರ್‌ | ರಾಜ್ಯ ಜಲನೀತಿ–2022

ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಶುಲ್ಕ: ರಾಜ್ಯ ಜಲನೀತಿ 2022ಕ್ಕೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 21:49 IST
Last Updated 12 ಆಗಸ್ಟ್ 2022, 21:49 IST
   

ಬೆಂಗಳೂರು: ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಅಂತರ್ಜಲ ಬಳಸಿದರೆ ಮೀಟರ್ ಆಧಾರಿತ ನೀರಿನ ಶುಲ್ಕ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ರಾಜ್ಯ ಜಲನೀತಿ–2022’ಕ್ಕೆ ಒಪ್ಪಿಗೆ ನೀಡಲಾಗಿದೆ. ವಾಣಿಜ್ಯ ಉದ್ದೇಶ ಹಾಗೂ ಕೃಷಿಗೆ ಅಂತರ್ಜಲ ಬಳಕೆ ಕಡಿಮೆ ಮಾಡುವುದು, ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುವುದು ಹಾಗೂ ನೀರಿನ ಸಮರ್ಪಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದು ಜಲನೀತಿಯ ಆಶಯವಾಗಿದೆ.

ಜಲಸಂಪನ್ಮೂಲ ನಿರ್ವಹಣೆ ಬಲಪಡಿಸಲು ಅಂತರ್‌ ವಿಭಾಗೀಯ ಪ್ರಾಧಿಕಾರ ರಚಿಸಲು ಸರ್ಕಾರ ಉದ್ದೇಶಿಸಿದೆ. ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ADVERTISEMENT

ಜಲನೀತಿಯ ಪ್ರಮುಖ ಅಂಶಗಳು: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮತ್ತು ಇತರ ನಗರ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಕಾರ್ಯಕ್ಕೆ ಹೊರಗಿನ, ಸ್ಥಳೀಯ ನೀರು, ಮೇಲ್ಮೈ ಮತ್ತು ಅಂತರ್ಜಲ, ಮೇಲ್ಛಾವಣಿ ಹಾಗೂ ತ್ಯಾಜ್ಯ ನೀರಿನ ನಿರ್ವಹಣೆಗೆ ಆದ್ಯತೆ.

₹40 ಸಾವಿರ ಕೋಟಿ ಹೂಡಿಕೆ

‘ಕರ್ನಾಟಕ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ನೀತಿ–2022–27’ ಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಈ ಅವಧಿಯಲ್ಲಿ ₹40 ಸಾವಿರ ಕೋಟಿ ಬಂಡವಾಳ ಹೂಡಿಕೆ ಆಗಲಿದೆ. ರಕ್ಷಣಾ ಉಪಕರಣಗಳು, ಯುದ್ಧ ವಿಮಾನಗಳು, ರಕ್ಷಣಾ ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಂಡವಾಳ ತೊಡಗಿಸುವವರಿಗೆ ಹಲವು ಬಗೆಯ ಪ್ರೋತ್ಸಾಹ ಮತ್ತು ರಿಯಾಯ್ತಿಗಳನ್ನೂ ಈ ನೀತಿಯಲ್ಲಿ ಪ್ರಕಟಿಸಲಾಗಿದೆ.

ಭಾರತದ ಶೇ 25 ರಷ್ಟು ವಿಮಾನ ಮತ್ತು ಬಾಹ್ಯಾಕಾಶ ನೌಕೆ ಉದ್ಯಮವು ಕರ್ನಾಟಕದಲ್ಲಿ ನೆಲೆಗೊಂಡಿದೆ. ರಕ್ಷಣಾ ಸೇವೆಗಳಿಗಾಗಿ ಎಲ್ಲ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಉತ್ಪಾದನೆ ಶೇ 67 ರಷ್ಟು ಇದ್ದು, ಅದನ್ನು ಇನ್ನೂ ಹೆಚ್ಚಿಸಲಾಗುವುದು. ಏರೋಸ್ಪೇಸ್‌ ಸಂಬಂಧಿತ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ 65 ಇದ್ದು, ಆ ಪ್ರಮಾಣ ಹೆಚ್ಚಿಸಲಾಗುವುದು.

ಮುಂದೂಡಿದ ವಿಷಯಕ್ಕೆ ಒಪ್ಪಿಗೆ ಎಂದ ಮಾಧುಸ್ವಾಮಿ

‘ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಯೋಜನೆ’ಯ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಮುಂದೂಡಿದ್ದರೂ ಅನುಮೋದನೆ ನೀಡಿದ ಮಹತ್ವದ ಯೋಜನೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ವಿವರಿಸಿದ ಘಟನೆ ನಡೆದಿದೆ.

‘₹3,000 ಕೋಟಿ ವೆಚ್ಚದಲ್ಲಿ ಯೋಜನೆ’ಯನ್ನು ಜಾರಿ ಮಾಡಲು ಒಪ್ಪಿಗೆ ನೀಡಲಾಗಿದೆ. ನೀತಿ ಆಯೋಗ ಸೂಚಿಸಿರುವ 49 ಸೂಚಕಗಳನ್ನು ಅಳವಡಿಸಿ ಜಾರಿ ಮಾಡಲಾಗುವುದು. 93 ತಾಲ್ಲೂಕುಗಳಲ್ಲಿ ಶಿಕ್ಷಣ ಗುಣಮಟ್ಟ ವೃದ್ಧಿಸಲು, 100 ತಾಲ್ಲೂಕುಗಳಲ್ಲಿ ಆರೋಗ್ಯ ಸೇವೆಯನ್ನು ಬಲಪಡಿಸಲು ಮತ್ತು 102 ತಾಲ್ಲೂಕುಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ಯೋಜನೆ ಇದಾಗಿದೆ’ ಎಂದು ಅವರು ಹೇಳಿದ್ದರು.

‘ಸಭೆಯಲ್ಲಿ ಈ ವಿಷಯ ಮಂಡನೆಯಾದಾಗಇನ್ನಷ್ಟು ಮಾಹಿತಿ ಕೇಳಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮುಂದಿನ ಸಂಪುಟ ಸಭೆಯಲ್ಲಿ ಇದನ್ನು ತೆಗೆದುಕೊಳ್ಳೋಣ ಎಂದು ಸೂಚನೆ ನೀಡಿ, ಮುಂದೂಡಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.