ADVERTISEMENT

ಪಿಎಸ್‌ಐ ನೇಮಕಾತಿ ಹಗರಣ: ಸಂಪುಟದಿಂದ ಗೃಹ ಸಚಿವರ ವಜಾಕ್ಕೆ ಸಿದ್ದರಾಮಯ್ಯ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜುಲೈ 2022, 13:30 IST
Last Updated 4 ಜುಲೈ 2022, 13:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅಧಿಕಾರಿಗಳನ್ನು ಮಾತ್ರ ಹೊಣೆಮಾಡಿ ಜಾರಿಕೊಳ್ಳುವುದು ಬೇಡ. ಈ ಹಗರಣಕ್ಕೆ ಅಧಿಕಾರಿಗಳಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ಕಾರಣ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಅಲ್ಲದೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಕಪಾಟಿನೊಳಗಿಂದ ಒಂದೊಂದೇ ಅಸ್ತಿಪಂಜರಗಳು ಹೊರಗೆ ಬೀಳುತ್ತಿವೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನವೇ ಇದಕ್ಕೆ ಸಾಕ್ಷಿ. ಹಗರಣವೇ ನಡೆದಿಲ್ಲ ಎಂದು ಮೈಮೇಲೆ ಬರುತ್ತಿದ್ದ ಸಿಎಂ ಹಾಗೂ ಗೃಹ ಸಚಿವರು ಈಗ ಏನು ಹೇಳುತ್ತಾರೆ?' ಎಂದು ಪ್ರಶ್ನಿಸಿದ್ದಾರೆ.

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಿಐಡಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.

ಆರ್‌ಎಸ್‌ಎಸ್ ಸಾಂಸ್ಕೃತಿಕ ಭಯೋತ್ಪಾದನೆ...
'ಶಿವಮೊಗ್ಗದ ಅನವಟ್ಟಿಯಲ್ಲಿ ಕನ್ನಡ ನಾಟಕ 'ಜತೆಗಿರುವನು ಚಂದಿರ' ಪ್ರದರ್ಶನಕ್ಕೆ ಆರ್‌ಎಸ್‌ಎಸ್ ಅಡ್ಡಿಪಡಿಸಿರುವುದು ಸಾಂಸ್ಕೃತಿಕ ಭಯೋತ್ಪಾದನೆಯಲ್ಲದೆ ಮತ್ತೇನಲ್ಲ. ಈ ಗೂಂಡಾಗಿರಿಯಲ್ಲಿ ಪಾಲುದಾರರಾದ ಎಲ್ಲಾ ದುಷ್ಕರ್ಮಿಗಳನ್ನು ಸರ್ಕಾರ ಈ ಕೂಡಲೇ ಬಂಧಿಸಿ, ಕಾನೂನು ಕ್ರಮಕೈಗೊಳ್ಳಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

'ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮದ ಪರವಾಗಿರುವ ಸಾಹಿತ್ಯ,‌ ನಾಟಕ ಕಲೆ‌ ಮೊದಲಾದ‌‌‌ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಕಂಡರೆ ಆರ್‌ಎಸ್‌ಎಸ್ ಮತ್ತು ಪರಿವಾರಕ್ಕೆ ಭಯ. ಈ ದಾಳಿಗೂ ಇದೇ ಕಾರಣ. ಇಂತಹ ಅಡ್ಡಿ-ಆತಂಕಗಳನ್ನು ಎದುರಿಸುವ ಚೈತನ್ಯ‌ ಕನ್ನಡದ ಸಾಂಸ್ಕೃತಿಕ‌ ಲೋಕಕ್ಕೆ ಇದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.