ಬೆಂಗಳೂರು: 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದ ರೈಲ್ವೆ ಬಜೆಟ್ 9 ಪಟ್ಟು ಏರಿಕೆಯಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರು ನಮ್ಮ ಮೆಟ್ರೊ ‘ಹಳದಿ ಮಾರ್ಗ’ಕ್ಕೆ ಚಾಲನೆ ನೀಡಿದರು. ಅದರ ನಂತರ ಅಶ್ವಿನಿ ವೈಷ್ಣವ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
2014ರಲ್ಲಿ ಕರ್ನಾಟಕದ ರೈಲ್ವೆ ಬಜೆಟ್ ₹ 835 ಕೋಟಿಯಾಗಿತ್ತು. ಇದೀಗ ₹ 7,500 ಕೋಟಿ ಬಜೆಟ್ ಅನ್ನು ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ನೀಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ಕರ್ನಾಟಕದಂತಹ ಪ್ರಮುಖ ರಾಜ್ಯದಲ್ಲಿನ ರೈಲ್ವೆ ಅಭಿವೃದ್ದಿಗೆ ಹಿಂದಿನ ಸರ್ಕಾರಗಳು ಸರಿಯಾದ ಯೋಜನೆಗಳನ್ನು ರೂಪಿಸಿರಲಿಲ್ಲ. ಆದರೆ, ಇದೀಗ ₹ 54 ಸಾವಿರ ಕೋಟಿ ಮೊತ್ತದ ಯೋಜನೆಗಳು ಸಿದ್ದವಾಗಿವೆ. ಅಮೃತ್ ಭಾರತ ಯೋಜನೆಯಡಿಯಲ್ಲಿ 61 ರೈಲ್ವೆ ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
2047ಕ್ಕೆ ಭಾರತವನ್ನು ಅಭಿವೃದ್ದಿ ಹೊಂದಿದ ದೇಶವನ್ನಾಗಿ ಮಾಡುವ ಗುರಿ ಹೊಂದಿರುವ ‘ವಿಕಸಿತ ಭಾರತ –2047’ ಸರ್ಕಾರದ ದೂರದೃಷ್ಠಿ ಯೋಜನೆಯಾಗಿದೆ. ಪ್ರಧಾನಿ ಮೋದಿಯವರು ಇದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಇದು ಕರ್ನಾಟಕ ಸೇರಿದಂತೆ ಭಾರತದ ಅಭಿವೃದ್ದಿಗೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.