ADVERTISEMENT

Karnataka Rains|ನಿರಂತರ ಮಳೆ: ರಾಗಿ, ಈರುಳ್ಳಿ ಬೆಳೆಗೆ ಹಾನಿ

ಚಿತ್ರದುರ್ಗ, ದಾವಣಗೆರೆ ಜಿಲ್ಲೆ; ಬೆಂಬಿಡದ ವರುಣ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 23:30 IST
Last Updated 23 ಅಕ್ಟೋಬರ್ 2025, 23:30 IST
<div class="paragraphs"><p>ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಹಡಗಲು ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತೆಂಗಿನ ತೋಟಗಳು ಜಲಾವೃತವಾಗಿವೆ</p></div>

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಹಡಗಲು ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತೆಂಗಿನ ತೋಟಗಳು ಜಲಾವೃತವಾಗಿವೆ

   

ಬೆಂಗಳೂರು: ಚಿತ್ರದುರ್ಗ, ಚಿಕ್ಕಮಗಳೂರು, ಮೈಸೂರು ಹಾಗೂ ‌ಕಲ್ಯಾಣ ಕರ್ನಾಟಕದಲ್ಲಿ ಬುಧವಾರ ಮುಂಜಾನೆ ಹಾಗೂ ಗುರುವಾರ ಬಿರುಸಿನ ಮಳೆಯಾಗಿದ್ದು, ಹಲವು ಕಡೆ ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಈರುಳ್ಳಿ ಬೆಳೆಗಳಿಗೆ ಹಾನಿಯಾಗಿದೆ.

ಚಿತ್ರದುರ್ಗ ವರದಿ:

ಬುಧವಾರ ಮಧ್ಯರಾತ್ರಿಯಿಂದ ಮಳೆ ಬಿರುಸಾಗಿದ್ದು ಬೆಳೆಗೆ ತೀವ್ರ ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ ರಾಗಿ, ಹೊಳಲ್ಕೆರೆ ತಾಲ್ಲೂಕಿನಲ್ಲಿ ಮೆಕ್ಕೆಜೋಳ, ಚಳ್ಳಕೆರೆ ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆ ಹಾಳಾಗಿದೆ.

ADVERTISEMENT

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕನ್ನಾಗುಂದಿ ಸಮೀಪದ ಸೇತುವೆ ಬಳಿ ವೇದಾವತಿ ನೀರು ಮೈದುಂಬಿ ಹರಿಯಿತು

ಮನೆಗಳಿಗೆ ನೀರು:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹಿನ್ನೀರು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.

ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದ್ದು, ವರ್ಷದಲ್ಲಿ ಎರಡನೇ ಬಾರಿಗೆ ಜಲಾಶಯ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯುತ್ತಿದೆ. ಸದ್ಯ ಜಲಾಶಯಕ್ಕೆ 6,702 ಕ್ಯೂಸೆಕ್‌ ಒಳಹರಿವು ಇದೆ. 6,418 ಕ್ಯೂಸೆಕ್‌ ಹೊರಹರಿವು ಇದೆ.

ದಾವಣಗೆರೆ ವರದಿ:

ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕಟಾವಿಗೆ ಬಂದಿರುವ ಬೆಳೆ ನೀರುಪಾಲಾಗುವ ಆತಂಕ ಮೂಡಿದೆ. ಬುಧವಾರ ಮಧ್ಯರಾತ್ರಿ ಆರಂಭವಾದ ಮಳೆ ಗುರುವಾರವೂ ಸುರಿಯಿತು.

ಹರಿಹರ ತಾಲ್ಲೂಕಿನ ಜಿಗಳಿ ಗ್ರಾಮದಲ್ಲಿ ಹಳ್ಳದ ನೀರು ನುಗ್ಗಿ 10 ಎಕರೆ ಭತ್ತದ ಬೆಳೆಗೆ ಹಾನಿಯಾಗಿದೆ. ಜಗಳೂರು ತಾಲ್ಲೂಕಿನಲ್ಲಿ ರಾಗಿ, ಈರುಳ್ಳಿ ನೆಲಕಚ್ಚಿದೆ. ಚನ್ನಗಿರಿ ತಾಲ್ಲೂಕಿನಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ.

ನೆಲಕ್ಕೊರಗಿದ ಭತ್ತ–ಕಲಬುರಗಿ ವರದಿ:

ನಗರ ಸೇರಿದಂತೆ ಕಲ್ಯಾಣ ಕರ್ನಾಟಕದ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಭತ್ತದ ಫಸಲು ನೆಲಕ್ಕೊರಗಿದೆ. ಕೊಪ್ಪಳ, ಕುಷ್ಟಗಿ, ಕನಕಗಿರಿ, ಮುನಿರಾಬಾದ್‌, ಯಲಬುರ್ಗಾ ಭಾಗದಲ್ಲಿ ಮಳೆ ಸುರಿದಿದೆ.

ಕಲಬುರಗಿಯಲ್ಲಿ ಮಧ್ಯಾಹ್ನ ಅರ್ಧ ಗಂಟೆ ಮಳೆ ಸುರಿದಿದೆ. ಜಿಲ್ಲೆಯ ಕಾಳಗಿ, ಕಮಲಾಪುರ ಹಾಗೂ ಆಳಂದದಲ್ಲೂ ಮಳೆಯಾದ ಬಗ್ಗೆ ವರದಿಯಾಗಿದೆ.

ಮನೆಗಳಿಗೆ ಹಾನಿ–ಮೈಸೂರು ವರದಿ:

ಜಿಲ್ಲೆಯೂ ಸೇರಿದಂತೆ ಕಾವೇರಿ ಕಣಿವೆಯಲ್ಲಿ ಬುಧವಾರ ನಸುಕಿನಿಂದ ಗುರುವಾರ ಬೆಳಿಗ್ಗೆಯವರೆಗೂ ಜೋರು ಮಳೆಯಾಯಿತು. ಇದರಿಂದಾಗಿ ಅಲ್ಲಲ್ಲಿ ಮನೆಗಳು ಹಾಗೂ ಬೆಳೆಗಳಿಗೆ ಹಾನಿಯಾಗಿದೆ.

ಮಡಿಕೇರಿ ವರದಿ: ಕೊಡಗು ಜಿಲ್ಲೆಯಾದ್ಯಂತ ಬುಧವಾರ ಭಾರಿ ಮಳೆಯಾಯಿತು. ಹಾರಂಗಿ ಜಲಾಶಯ ಅಕ್ಟೋಬರ್ ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಎರಡನೇ ಸಲ ಭರ್ತಿಯಾಗಿದೆ.

ಮಂಡ್ಯ ವರದಿ: ಜಿಲ್ಲೆಯ ಕಿಕ್ಕೇರಿ ಹೋಬಳಿಯ ಕಾರಿಗಾನಹಳ್ಳಿ ಗ್ರಾಮದ ಕಾಂತರಾಜು ಎಂಬವರ ಮನೆ ಕುಸಿದಿದ್ದು, ಮನೆಯಲ್ಲಿದ್ದ ದವಸ–ಧಾನ್ಯ, ಅಡುಗೆ ಪಾತ್ರೆಗಳು ಹಾಳಾಗಿವೆ.

ಹಾಸನ ವರದಿ: ಹಾಸನ ಜಿಲ್ಲೆಯಲ್ಲಿ ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಬಿದ್ದಿದೆ. ಬುಧವಾರ ರಾತ್ರಿ ಸುರಿದ ಜೋರು ಮಳೆಯಿಂದಾಗಿ ಕೆಲ ಗ್ರಾಮಗಳಲ್ಲಿ ರಸ್ತೆಗಳಿಗೆ ಹಾನಿ ಉಂಟಾಗಿದೆ.

ಗುಡುಗಿನ ಅರ್ಭಟ– ಹುಬ್ಬಳ್ಳಿ ವರದಿ: ಧಾರವಾಡ, ಉತ್ತರ ಕನ್ನಡ, ಗದಗ, ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಯ ವಿವಿಧೆಡೆ ಕೆಲವೆಡೆ ಮಳೆ ಸುರಿಯಿತು.

ಧಾರವಾಡ ಸೇರಿ ಜಿಲ್ಲೆಯ ಹುಬ್ಬಳ್ಳಿ, ಕಲಘಟಗಿ, ಕುಂದಗೋಳದಲ್ಲಿ ಗುಡುಗು, ಮಿಂಚಿನೊಂದಿಗೆ ಧಾರಾಕಾರ ಮಳೆ ಸುರಿಯಿತು.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಹೊನ್ನಾವರ, ಕುಮಟಾದಲ್ಲಿ ಹೆಚ್ಚು ಮಳೆ ಸುರಿಯಿತು. ಮುಂಡಗೋಡ ಭಾಗದಲ್ಲೂ ಮಳೆಯಾಯಿತು.

ಗದಗವೂ ಸೇರಿ ಜಿಲ್ಲೆಯ ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ, ಗಜೇಂದ್ರಗಡ ಭಾಗದಲ್ಲಿ ಮಳೆ ಸುರಿಯಿತು.

ಬೆಳಗಾವಿ ನಗರ, ಸವದತ್ತಿ, ರಾಮದುರ್ಗ ತಾಲ್ಲೂಕುಗಳಲ್ಲೂ ಸಾಧಾರಣ ಮಳೆ ಸುರಿಯಿತು.

12 ಮನೆ ಹಾನಿ:

ಬಳ್ಳಾರಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ 12 ಮನೆಗಳಿಗೆ ಹಾನಿಯಾಗಿದೆ.

ಸಿರುಗುಪ್ಪ, ಕಂಪ್ಲಿ ಭಾಗದಲ್ಲಿ ಭತ್ತದ ಬೆಳೆ ನೆಲಕ್ಕೊರಗಿದ್ದು, ತೆನೆ ಮೊಳಕೆಯೊಡೆಯುವ ಆತಂಕ ಎದುರಾಗಿದೆ. ಹತ್ತಿ ಬೆಳೆಗೆ ತೇವಾಂಶ ಹೆಚ್ಚಾಗಿದ್ದು, ಕಪ್ಪಾಗುತ್ತಿದೆ. ಇಳುವರಿ ಕುಸಿಯುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಮಳೆಯಿಂದಾಗಿರುವ ಬೆಳೆ ಹಾನಿ ಕುರಿತು ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸುತ್ತಿದ್ದು, ಶುಕ್ರವಾರ ಸಂಜೆ ಹೊತ್ತಿಗೆ ನಿಖರ ಅಂಕಿ ಸಂಖ್ಯೆ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೀರಿನಲ್ಲಿ ಕೊಚ್ಚಿ ಹೋಗಿದ್ದ ರೈತ ಶವವಾಗಿ ಪತ್ತೆ

ಚಿಕ್ಕಮಗಳೂರು: ಜಿಲ್ಲೆಯ ಬಯಲು ಸೀಮೆಯ ಪ್ರದೇಶದಲ್ಲಿ ಮಳೆ ಜೋರಾಗಿದ್ದು, ತೆಂಗಿನ ತೋಟಗಳು ಜಲಾವೃತಗೊಂಡಿವೆ. ತಾಲ್ಲೂಕಿನ ದೇವಗೊಂಡನಹಳ್ಳಿಯಲ್ಲಿ ನೀರಿನಲ್ಲಿ ಕೊಚ್ಚಿಹೋದ ರೈತರೊಬ್ಬರು ಮೃತಪಟ್ಟಿದ್ದಾರೆ.

ಎಮ್ಮೆ ಮೇಯಿಸಲು ಹೋಗಿದ್ದ ಲಕ್ಷ್ಮಣಗೌಡ ಮನೆಗೆ ವಾಪಸ್ ಬಂದಿರಲಿಲ್ಲ. ಬುಧವಾರ ಹಳ್ಳದ ನೀರಿನಲ್ಲಿ ಅವರ ಮೃತದೇಹ ದೊರೆತಿದೆ. ಹಳ್ಳ ದಾಟುವಾಗ ಕಾಲುಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ‌.

ಕಡೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆ ಸುರಿದಿದೆ ಕಡೂರು- ಚಿಕ್ಕಮಗಳೂರು ರೈಲು ಸಂಚಾರಕ್ಕೂ ಗುರುವಾರ ಕೆಲಕಾಲ ತೊಂದರೆಯಾಗಿತ್ತು. ಭಾರಿ ಮಳೆಗೆ ಕಣಿವೆ ಗ್ರಾಮದ ಬಳಿ ರೈಲು ಮಾರ್ಗದ ಜಲ್ಲಿ ಜರಿದಿದ್ದವು. ಚಿಕ್ಕಮಗಳೂರಿನಿಂದ ಶಿವಮೊಗ್ಗ ಹೊರಟಿದ್ದ ರೈಲನ್ನು ಅರ್ಧ ಗಂಟೆ ನಿಲ್ಲಿಸಿ‌ ಜಲ್ಲಿ ಸರಿಪಡಿಸಲಾಯಿತು. ಬಳಿಕ ರೈಲು ಸಂಚಾರ ಸುಗಮಗೊಂಡಿದೆ.

ಕಿತ್ತೂರು ಉತ್ಸವಕ್ಕೆ ಅಡ್ಡಿ– ಬೆಳಗಾವಿ (ವರದಿ):

ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ಗುರುವಾರ ಆರಂಭವಾದ ಕಿತ್ತೂರು ಉತ್ಸವದ ಮೊದಲ ದಿನವೇ ಪಟ್ಟಣದಲ್ಲಿ ಧಾರಾಕಾರ ಮಳೆ ಸುರಿಯಿತು. ಉತ್ಸವಕ್ಕೆ ಸೇರಿದ್ದ ಅಪಾರ ಜನ ಚದುರಿಹೋದರು. ಮಳೆಯಲ್ಲೇ ಕಲಾವಿದರು ಮೆರವಣಿಗೆ ಮುಂದುವರಿಸಿದರು.

ಮಧ್ಯಾಹ್ನ 3ರ ಬಳಿಕ ಬಿರುಸು ಪಡೆದ ಮಳೆ ಎರಡು ತಾಸು ಎಡೆಬಿಡದೇ ಸುರಿಯಿತು. ಉತ್ಸವದ ವೇದಿಕೆ ಹಾಕಿರುವ ಕೋಟೆ ಮೈದಾನದಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.