ADVERTISEMENT

Karnataka Rains | ನದಿ ಹರಿವು ಹೆಚ್ಚಳ: ಸಂಪರ್ಕ ಕಡಿತ

‘ಮಹಾ’ ಅಣೆಕಟ್ಟೆಗಳಿಂದ ನೀರು ಬಿಡುಗಡೆ ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 0:30 IST
Last Updated 24 ಸೆಪ್ಟೆಂಬರ್ 2025, 0:30 IST
<div class="paragraphs"><p>ಹುಲಸೂರ ಪಟ್ಟಣದ ಮೆಹಕರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಿಂದ ಆವೃತವಾಗಿದೆ</p></div>

ಹುಲಸೂರ ಪಟ್ಟಣದ ಮೆಹಕರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಿಂದ ಆವೃತವಾಗಿದೆ

   

ಹುಲಸೂರ (ಬೀದರ್ ಜಿಲ್ಲೆ): ಸಮೀಪದ ಕೊಂಗಳಿ ಗ್ರಾಮದ ಬಳಿಯಿರುವ ಸೇತುವೆ ಬಳಿ ನೀರಿನ ಹರಿವು ಹೆಚ್ಚಾಗಿದೆ. ರಸ್ತೆ ಜಲಾವೃತಗೊಂಡು ಮೆಹಕರ–ಕೊಂಗಳಿ, ವಾಂಜರಖೇಡ ಗ್ರಾಮದಿಂದ ಔರಾದ (ಶಾ), ತುಗಾಂವ (ಎಚ್)–ಹಲಸಿ ಗ್ರಾಮಗಳ ಸಂಪರ್ಕ ಕಡಿತವಾಗಿದೆ. 

ನೆರೆಯ ಮಹಾರಾಷ್ಟ್ರದ ಧನೇಗಾಂವ, ತೆರಣ, ಹೂಸುರ, ಮಸಲಗಾ ಜಲಾಶಯಗಳಿಂದ ಮಂಗಳವಾರ 80 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಬೆಳಿಗ್ಗೆಯಿಂದ ನದಿಯ ಹರಿವಿನಲ್ಲೂ ಏರಿಕೆ ಕಂಡುಬಂದಿದೆ.

ADVERTISEMENT

ಮಾಂಜ್ರಾ ನದಿ ಪಾತ್ರದ ಹಲಸಿ ತುಗಾಂವ, ಕೊಂಗಳಿ, ವಾಂಜರಖೇಡ, ಮೆಹಕರ, ಬೋಳೆಗಾಂವ, ನಾರದಾ ಸಂಗಮ, ಅಟ್ಟರಗಾ, ಸಾಯಗಾಂವ, ಹುಲಸೂರ ಸೇರಿ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಸರು, ಉದ್ದು, ತೊಗರಿ, ಸೋಯಾ ಅವರೆ ಬೇಳೆಗಳು ಅಧಿಕ ತೇವಾಂಶದಿಂದ ಕೊಳೆಯುತ್ತಿದ್ದು, ರೈತರಿಗೆ ದಿಕ್ಕುತೋಚದಂತಾಗಿದೆ. 

ಕೆಲವೆಡೆ ವಿದ್ಯುತ್ ಕಂಬಗಳು ಬಾಗಿದ್ದು, ರಾತ್ರಿಯಿಡಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಹೊಲಗಳ ಒಡ್ಡುಗಳು ಕೊಚ್ಚಿಕೊಂಡು ಹೋಗಿವೆ.

ತೋರಿ ಬಸವಣ್ಣ ದೇವಸ್ಥಾನ ಜಲಾವೃತ: ಉಕ್ಕಿ ಹರಿಯುತ್ತಿರುವ ಮಾಂಜ್ರಾ ನದಿ ಪಾತ್ರದ ಐತಿಹಾಸಿಕ ತೋರಿ ಬಸವಣ್ಣ ದೇವಸ್ಥಾನ ದೇವಸ್ಥಾನ ಮುಳುಗಿದೆ. ಭಕ್ತರು, ದೂರದಲ್ಲಿಯೇ ನಿಂತು ನಮಸ್ಕರಿಸಿ ವಾಪಸ್ಸಾದರು. ರಾತ್ರಿ ಸುರಿದ ಮಳೆಗೆ ಮುಚಳಂಬ ಗ್ರಾಮದಲ್ಲಿ ಒಟ್ಟು 5 ಮನೆಗಳ ಗೋಡೆ ಕುಸಿದಿದೆ.

ಕಲಬುರಗಿ ವರದಿ:

ಜಿಲ್ಲೆಯಲ್ಲಿ ಮಂಗಳವಾರ ಮಳೆಯಾಗಿಲ್ಲ. ಆದರೆ, ರಾತ್ರಿ 8 ಗಂಟೆ ಹೊತ್ತಿಗೆ ಭೀಮಾ ನದಿಗೆ ಒಟ್ಟು 2.75 ಲಕ್ಷ ಕ್ಯೂಸೆಕ್‌ಗಳಷ್ಟು ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಸೊನ್ನ ಬ್ಯಾರೇಜ್‌ನಿಂದ ನದಿ ಪಾತ್ರಕ್ಕೆ ಹರಿಬಿಡಲಾಗಿದೆ.

ಮಣ್ಣೂರು ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತವಾಗಿದೆ. ನವರಾತ್ರಿ ವೇಳೆ ವಿಶೇಷ ಪೂಜೆ, ದರ್ಶನ ಇಲ್ಲದಂತಾಗಿದೆ. ಮತ್ತೊಂದೆಡೆ ಘತ್ತರಗಾ, ದೇವಲ ಗಾಣಗಾಪುರದ ಸೇತುವೆಗಳು ಜಲಾವೃತವಾಗಿ, ಸತತ 4ನೇ ದಿನವೂ ಸಂಚಾರಕ್ಕೆ ಮುಕ್ತವಾಗಿಲ್ಲ.

ಭೀಮಾ ನದಿ ಉಕ್ಕೇರಿ ಯಾದಗಿರಿ ಜಿಲ್ಲೆಯಲ್ಲಿ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಕಂಗಳೇಶ್ವರ ದೇವಸ್ಥಾನ, ಸ್ಮಶಾನವೂ ಜಲಾವೃತಗೊಂಡಿದೆ. ನಾಯ್ಕಲ್, ಹೆಡಗಿಮದ್ರಾ, ತಳಕ, ಮುಷ್ಟುರು, ಮಲ್ಹಾರ್ ಸೇರಿದಂತೆ ನದಿ ಪಾತ್ರದ ಗ್ರಾಮಗಳ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದೆ.

ಕೊಪ್ಪಳ ಜಿಲ್ಲೆಯ ಬಹುತೇಕ ಕಡೆ ಮಂಗಳವಾರ ದಿನಪೂರ್ತಿ ಮಳೆ ಕಾಡಿತು. ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆಯಿಂದ ರಾತ್ರಿಯ ತನಕ ನಿರಂತರ ಮಳೆ ಸುರಿದಿದೆ. ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಹಾಗೂ ಜನರ ದೈನಂದಿನ ಬದುಕಿಗೆ ಅಡ್ಡಿಯಾಯಿತು.

ಮಂಗಗಳಿಗೆ ಆಹಾರ

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿ ನಾರದ ಸಂಗಮ ಹಾಗೂ ಕೊಂಗಳಿ ಗ್ರಾಮದ ಬಳಿಯ ಮಾಂಜ್ರಾ ನದಿಯ ಪಕ್ಕದಲ್ಲಿರುವ ಮರಗಳ ಮೇಲೆ ಮಂಗಗಳು ಸಿಲುಕಿಕೊಂಡಿದ್ದವು.
ಅಗ್ನಿಶಾಮಕ ದಳದವರ ಸಹಾಯದಿಂದ ಮಂಗಗಳಿಗೆ ತಿನ್ನಲು ಆಹಾರ ಪೂರೈಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಭೀಮೆಗೆ 2.55 ಲಕ್ಷ ಕ್ಯೂಸೆಕ್ಸ್‌ ನೀರು

ಇಂಡಿ (ವಿಜಯಪುರ ಜಿಲ್ಲೆ): ತಾಲ್ಲೂಕಿನಲ್ಲಿ ಹರಿಯುವ ಭೀಮಾ ನದಿಗೆ 2.55 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸೀನಾ ನದಿ ಪಾತ್ರ, ಉಜನಿ ಜಲಾಶಯದಿಂದ ನೀರು ಹರಿದು ಬರುತ್ತಿದೆ. ನೀರು ಕರ್ನಾಟಕದ ನದಿಪಾತ್ರ ತಲುಪಿದ್ದು, ಎಲ್ಲಾ ಗ್ರಾಮಗಳು ಸುರಕ್ಷಿತವಾಗಿವೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ತಿಳಿಸಿದ್ದಾರೆ.

‘ಎಲ್ಲಾ ಪಿಡಿಒಗಳಿಗೆ ಕರ್ತವ್ಯಸ್ಥಳದಲ್ಲಿ ಇರಲು ಸೂಚಿಸಲಾಗಿದೆ. ಪ್ರವಾಹದಂತಹ ಪರಿಸ್ಥಿತಿ ತಲೆದೋರಿದ್ದಲ್ಲಿ, ನಿಗಾ ವಹಿಸಲು ಸೂಚಿಸಲಾಗಿದೆ. ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ತಿಳಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಯಲ್ಲಮ್ಮ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇದರ ಹಿನ್ನೆಲೆಯಲ್ಲಿ ಭಕ್ತರು ದೂರದಿಂದಲೇ ದೇಗುಲ ದರ್ಶನ ಪಡೆಯಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.