ADVERTISEMENT

ಪ್ರವಾಹ: ವಿವಿಧೆಡೆ ಸೇತುವೆಗಳು ಜಲಾವೃತ, ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಾಲಾ– ಕಾಲೇಜುಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 20:00 IST
Last Updated 7 ಸೆಪ್ಟೆಂಬರ್ 2019, 20:00 IST
ರಾಯಬಾಗ ತಾಲ್ಲೂಕಿನ ಕುಡಚಿ ಬಳಿಯ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಸೇತುವೆ ಶನಿವಾರ ಜಲಾವೃತಗೊಂಡಿದೆ
ರಾಯಬಾಗ ತಾಲ್ಲೂಕಿನ ಕುಡಚಿ ಬಳಿಯ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಸೇತುವೆ ಶನಿವಾರ ಜಲಾವೃತಗೊಂಡಿದೆ   

ಹುಬ್ಬಳ್ಳಿ: ಕೃಷ್ಣಾ, ಮಲಪ್ರಭಾ, ಘಟಪ್ರಭಾ, ತುಂಗಭದ್ರಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಬೆಳಗಾವಿ, ಗದಗ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮತ್ತೆ ಪ್ರವಾಹ ಸ್ಥಿತಿ ಎದುರಾಗಿದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆದಿದೆ.

ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಶಾಲಾ–ಕಾಲೇಜುಗಳಿಗೆ ಭಾನುವಾರ ರಜೆ ಘೋಷಿಸಲಾಗಿದೆ. ಆಗಸ್ಟ್‌ನಲ್ಲಿ ಪ್ರವಾಹ ಉಂಟಾದಾಗ ನೀಡಲಾಗಿದ್ದ ರಜೆ ಸರಿದೂಗಿಸಲು ಭಾನುವಾರವೂ ತರಗತಿಗಳನ್ನು ನಡೆಸಲಾಗುತ್ತಿತ್ತು.

‌ಪ್ರವಾಹದ ಕಾರಣ ಮನೆಯ ಸಾಮಗ್ರಿಗಳನ್ನು ಸ್ಥಳಾಂತರಿಸುತ್ತಿದ್ದ ವೇಳೆ ಅಥಣಿ ತಾಲ್ಲೂಕಿನ ಜನವಾಡ ಗ್ರಾಮದ ಶೋಭಾ ಬಾಳಪ್ಪ ಸುತಾರ (40) ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ADVERTISEMENT

ಮಲಪ್ರಭಾ ಉಗಮ ಸ್ಥಳವಾದ ಖಾನಾಪುರ ತಾಲ್ಲೂಕಿನ ಕಣಕುಂಬಿ ಪ್ರದೇಶದಲ್ಲಿ ಶನಿವಾರ 17.1 ಸೆಂ.ಮೀ ಮಳೆ ಸುರಿದಿದೆ.

ಸಿಂಧನೂರು– ಹೆಮ್ಮಡಗಾ, ಜಾಂಬೋಟಿ– ಜತ್ತ, ಖಾನಾಪುರ– ಮಿಲಾವಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೃಷ್ಣಾ ನದಿಯಿಂದ ಜಲಾವೃತಗೊಂಡಿರುವ ಚಿಕ್ಕೋಡಿ, ನಿಪ್ಪಾಣಿ ಹಾಗೂ ರಾಯಬಾಗದ 7 ಸೇತುವೆಗಳು ಯಥಾಸ್ಥಿತಿಯಲ್ಲಿವೆ. ಜಮಖಂಡಿ ತಾಲ್ಲೂಕಿನ ಜಂಬಗಿ–ಶೂರ್ಪಾಲಿ ನಡುವಿನ ಸಂಚಾರ ಬಂದ್‌ ಆಗಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದೆ. ಅಲ್ಲಿನ ರಾಜಾಪುರ ಬ್ಯಾರೇಜ್‌ನಿಂದ 1.26 ಲಕ್ಷ ಕ್ಯುಸೆಕ್ ಹಾಗೂ ದೂಧ್ ಗಂಗಾ ನದಿಯ 24,000 ಕ್ಯುಸೆಕ್ ಸೇರಿ ಕೃಷ್ಣಾ ನದಿಗೆ 1.50 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಗದಗ ಜಿಲ್ಲೆಯ ಕೊಣ್ಣೂರು ಸೇತುವೆ ಮೇಲೆ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಹುಬ್ಬಳ್ಳಿ– ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ಮಲಪ್ರಭಾ ನದಿ ತೀರದ ಲಕಮಾಪುರ ಗ್ರಾಮದ 120 ಹಾಗೂ ಕೊಣ್ಣೂರಿನ 200 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ, ಬೂದಿಹಾಳ ಮತ್ತುಕುರುವಿನಕೊಪ್ಪ ಗ್ರಾಮಸ್ಥರನ್ನು ನವಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ.

ವಾಸನ, ಮೆಣಸಗಿ, ಗುಳಗುಂದಿ, ಅಮರಗೋಳ, ಬಸರಕೋಡ, ಹೊಳೆಹಡಗಲಿ, ಗಾಡಗೋಳಿ, ಹೊಳೆಮಣ್ಣೂರು, ಬಿ.ಎಸ್.ಬೇಲೇರಿ ಗ್ರಾಮಗಳ ಜನರಿಗೆ ನವಗ್ರಾಮ ಅಥವಾ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದ್ದಾರೆ.

ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಹಂಪಿ ಪುರಂದರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಚಕ್ರತೀರ್ಥ, ರಾಮ ಲಕ್ಷ್ಮಣ ದೇವಸ್ಥಾನಕ್ಕೆ ಹೋಗುವ ಮಾರ್ಗ ಜಲಾವೃತವಾಗಿದೆ. ವಿಜಯನಗರ ಕಾಲದ ಕಾಲು ಸೇತುವೆ ಬಹುತೇಕ ಮುಳುಗಡೆಯಾಗಿದೆ. ಹಂಪಿ–ವಿರೂಪಾಪುರ ಗಡ್ಡಿ ನಡುವೆ ಸಂಪರ್ಕ ಕಡಿತಗೊಂಡಿದೆ.

ಪ್ರವಾಹ ಏರುಗತಿ: (ಕಲಬುರ್ಗಿ ವರದಿ): ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೊರಬಿಡುವ ನೀರಿನ ಪ್ರಮಾಣವನ್ನು ಶನಿವಾರ 1.44 ಲಕ್ಷ ಕ್ಯುಸೆಕ್‌ಗೆ ಏರಿಕೆ ಮಾಡಲಾಗಿದೆ. ಇದೇ ವೇಳೆ, ತುಂಗಭದ್ರಾ ನದಿಯಲ್ಲೂ ನೀರಿನ ಹರಿವು 97 ಸಾವಿರ ಕ್ಯುಸೆಕ್‌ನಿಂದ 1.10 ಲಕ್ಷ ಕ್ಯುಸೆಕ್‌ಗೆ ಹೆಚ್ಚಳವಾಗಿದೆ. ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ಜಿಲ್ಲಾಡಳಿತದ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ತುಂಗಭದ್ರಾ ಜಲಾಶಯದ 28 ಕ್ರಸ್ಟ್‌ಗೇಟ್‌ಗಳಿಂದ ನೀರು ಬಿಡಲಾಗುತ್ತಿದ್ದು,95,714 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ನದಿ ದಡದಲ್ಲಿರುವ ವಿಜಯನಗರ ಅರಸು ಶ್ರೀಕೃಷ್ಣದೇವರಾಯನ ಸಮಾಧಿಯ 64 ಕಾಲಿನ ಮಂಟಪ ಜಲಾವೃತವಾಗಿದೆ. ವಿರೂಪಾಪುರಗಡ್ಡೆ ಸಂಪರ್ಕ ಕಡಿತಗೊಂಡಿದೆ.

ಮುನಿರಾಬಾದ್, ಹುಲಿಗಿ, ಆನೆಗೊಂದಿ, ಶಿವಾಪುರ ಸೇರಿ ತುಂಗಭದ್ರಾನದಿ ತೀರದ 30 ಗ್ರಾಮಗಳಿಗೆ ಮತ್ತು ಕೃಷ್ಣಾ ನದಿ ತೀರದಲ್ಲಿನ 52 ಗ್ರಾಮಗಳಿಗೆ ಈಗಾಗಲೇ ಪ್ರವಾಹದ ಕುರಿತು ಮುನ್ಸೂಚನೆ ನೀಡಲಾಗಿದೆ.ನದಿ ತೀರದ ಪಂಪ್‌ಸೆಟ್‌ಗಳಿಗೆ ಪೂರೈಸುವ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಮುಳುಗಡೆಯಾಗಲಿರುವ ವಿದ್ಯುತ್‌ ಪರಿವರ್ತಕಗಳನ್ನು ಸ್ಥಳಾಂತರಿಸುವ ಬಗ್ಗೆ ಜೆಸ್ಕಾಂ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಭದ್ರಾವತಿ: ಮನೆ ಕುಸಿದು ಮಹಿಳೆ ಸಾವು

ಶಿವಮೊಗ್ಗ: ಸತತ ಮಳೆಯಿಂದಾಗಿ ಭದ್ರಾವತಿ ತಾಲ್ಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಶನಿವಾರ ಮನೆ ಕುಸಿದು ಉಮರ್ ಅಂಜುಮ್ (35) ಮೃತಪಟ್ಟಿದ್ದಾರೆ.

ಪತಿ ಜಾವೇದ್ ಮತ್ತು ಮೂವರು ಮಕ್ಕಳ ಜತೆ ಉಮರ್‌ ಅಂಜುಮ್‌ ಮನೆಯಲ್ಲಿ ವಾಸಿಸುತ್ತಿದ್ದರು. ಸತತವಾಗಿ ಸುರಿದ ಮಳೆಯಿಂದ ಮನೆ ಕುಸಿದು ಬಿದ್ದಿದ್ದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.

ಸಾಧಾರಣ ಮಳೆ: ಜಿಲ್ಲೆಯ ಹಲವೆಡೆ ಶನಿವಾರ ಸಾಧಾರಣ ಮಳೆಯಾಗಿದ್ದು, ಕೆಲವೆಡೆ ಉತ್ತಮ ಮಳೆಯಾಗಿದೆ.

ಆಗುಂಬೆ, ಮಾಸ್ತಿಕಟ್ಟೆ, ಹೊಸನಗರ, ನಗರ, ಜೋಗ, ಸೊರಬ ಭಾಗದಲ್ಲಿ ಉತ್ತಮ ಮಳೆಯಾಗಿದೆ. ತೀರ್ಥಹಳ್ಳಿ, ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸಾಗರ, ಹೊಳೆಹೊನ್ನೂರು ಭಾಗದಲ್ಲಿ ಸಾಧಾರಣ ಮಳೆ ದಾಖಲಾಗಿದೆ.

ಮುಂದುವರಿದ ಮಳೆ ಹಲವೆಡೆ ರಸ್ತೆ ಸಂಪರ್ಕ ಕಡಿತ

ಮಂಗಳೂರು: ಶನಿವಾರವೂ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ‍್ರವಾಹ ಪೀಡಿತ ಬೆಳ್ತಂಗಡಿ ತಾಲ್ಲೂಕಿನಲ್ಲಿ ಮತ್ತೆ ಮಳೆಯ ಆರ್ಭಟ ಹೆಚ್ಚಾಗಿದ್ದು, ಸಂತ್ರಸ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ಸುಳ್ಯ ತಾಲ್ಲೂಕಿನಲ್ಲಿ 6.5 ಸೆಂ.ಮೀ. ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ 6 ಸೆಂ.ಮೀ. ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ– ತತ್ಕೊಳ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ರಸ್ತೆಯಲ್ಲಿ ಬನದೇವಿ ಎಸ್ಟೇಟ್ ಸಮೀಪ ರಸ್ತೆಯ ಅರ್ಧ ಭಾಗ ಕೊಚ್ಚಿಹೋಗಿದೆ.

ಕಡೂರು– ಮಂಗಳೂರು ರಸ್ತೆಯ ಕುದುರೆಗುಂಡಿ ಗ್ರಾಮದ ಬಳಿ ಖಾಸಗಿ ಕಾಫಿ ತೋಟದಿಂದ ನೀರು ಧುಮ್ಮಿಕ್ಕುತ್ತಿದ್ದು, ಕಾಫಿ ಗಿಡಗಳು ಕೊಚ್ಚಿಕೊಂಡು ಹೆದ್ದಾರಿಯ ಇಕ್ಕೆಲದಲ್ಲಿ ಬಿದ್ದಿವೆ.

ದೊಡ್ಡಳ್ಳದ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು, ಮೂಡಿಗೆರೆ – ಬಾಳೆಹೊನ್ನೂರು ಸಂಪರ್ಕ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿತ್ತು. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಅರಳಿಗಂಡಿ ಗ್ರಾಮದ ಕಾಲುರಸ್ತೆ ಮಳೆಗೆ ಸಂಪೂರ್ಣ ಕೊಚ್ಚಿಹೋಗಿದ್ದು, ಹಾನಿ ಉಂಟಾಗಿದೆ. ಮಳೆ ಹೆಚ್ಚಾಗಿದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದು, ಮೊಬೈಲ್ ನೆಟ್‌ವರ್ಕ್ ಕೂಡ ಕಡಿತವಾಗಿದೆ.

ಬಣಕಲ್‌, ಕೊಟ್ಟಿಗೆಹಾರ ಪ್ರದೇಶದಲ್ಲೂ ಧಾರಾಕಾರವಾಗಿ ಮಳೆಯಾಗುತ್ತಿದೆ. ನರಸಿಂಹರಾಜಪುರ, ಕೊಪ್ಪ, ತರೀಕೆರೆ, ಕಳಸ, ಶೃಂಗೇರಿ, ಬಾಳೆಹೊನ್ನೂರು ಸುತ್ತಮುತ್ತ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.