ADVERTISEMENT

ರಾಜ್ಯದ ವಿವಿಧ ಕಡೆ ವರ್ಷಧಾರೆ: ಸಿಡಿಲು ಬಡಿದು ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
<div class="paragraphs"><p>ಬೆಳಗಾವಿ ನಗರದ ರಾಣಿ ಪಾರ್ವತಿದೇವಿ ವೃತ್ತದಲ್ಲಿ ಸವಾರರು ಮಳೆಯಲ್ಲೇ ಸಾಗಿದರು</p></div>

ಬೆಳಗಾವಿ ನಗರದ ರಾಣಿ ಪಾರ್ವತಿದೇವಿ ವೃತ್ತದಲ್ಲಿ ಸವಾರರು ಮಳೆಯಲ್ಲೇ ಸಾಗಿದರು

   

 -ಪ್ರಜಾವಾಣಿ ಚಿತ್ರ / ಏಕನಾಥ ಅಗಸಿಮನಿ

ಹುಬ್ಬಳ್ಳಿ/ನಾಪೋಕ್ಲು: ರಾಜ್ಯದ ವಿವಿಧೆಡೆ ಶುಕ್ರವಾರ ಮಳೆಯಾಗಿದ್ದು ವಾತಾವರಣವನ್ನು ತಂಪಾಗಿಸಿದೆ. ಕೆಲವೆಡೆ ಗುಡುಗು– ಮಿಂಚಿನ ಸಹಿತ ಹಾಗೂ ಕಲಘಟಗಿಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಸಿಡಿಲು ಬಡಿದು ಇಬ್ಬರು ಸಾವಿಗೀಡಾಗಿದ್ದಾರೆ.

ADVERTISEMENT

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಪಟ್ಟಣ ಸೇರಿದಂತೆ ಹಲವೆಡೆ ಮಳೆಯಾಗಿದೆ. ಶೃಂಗೇರಿಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ತಂಪೆರೆದಿದೆ.

ಕೊಡಗು, ಬೆಳಗಾವಿ, ವಿಜಯ ನಗರ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ರಭಸದ ಮಳೆಯಾಗಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ತಾಂಬಾದಲ್ಲಿ ಜಮೀನಿಗೆ ಹೋದಾಗ ಸಿಡಿಲು ಬಡಿದು ಭಾರತಿ ಹಣುಮಂತ ಕೆಂಗನಾಳ (40)  ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಕೋಡಂಬಿ ಗ್ರಾಮದ ಬಳಿ ಸಿಡಿಲು ಬಡಿದು ಐದು ಜಾನುವಾರುಗಳು ಸಾವನ್ನಪ್ಪಿವೆ.

ಧಾರವಾಡ ಜಿಲ್ಲೆಯ ಸೂಳಿಕಟ್ಟಿ ಗ್ರಾಮದ ರಸ್ತೆ ಬದಿ 20 ವಿದ್ಯುತ್‌ ಕಂಬ, ಎರಡು ಮರಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು. ಗುಡುಗು, ಮಿಂಚು, ಗಾಳಿ ಆರ್ಭಟವಿತ್ತು. ಗ್ರಾಮ ದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ.

ಬೆಳಗಾವಿ ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಗುಡುಗು– ಮಿಂಚಿನ ಸಹಿತ ಉತ್ತಮ ಮಳೆಯಾಗಿದೆ. ರಾಮದುರ್ಗ, ಬೈಲಹೊಂಗಲ ಪಟ್ಟಣ ಮತ್ತು ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆ ಯಾಗಿದೆ. ಬೆಳಗಾವಿಯ ಅನಗೋಳದ ಸಂತ ಮೀರಾ ಶಾಲೆಯಲ್ಲಿ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡಿತು.

ದಾವಣಗೆರೆ, ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರ್ಷದ ಮೊದಲ ಮಳೆಯು ಹಿತಕರ ವಾತಾವರಣ ಸೃಷ್ಟಿಸಿತು.

ಶಿವಮೊಗ್ಗ ವರದಿ: ಜಿಲ್ಲೆಯ ತೀರ್ಥಹಳ್ಳಿ, ಕುಂಸಿ, ಆನಂದಪುರ, ಕೋಣಂದೂರು ಭಾಗದಲ್ಲಿ ತುಂತುರು ಮಳೆ ಬಂದಿದೆ. ಕುಂಸಿ ಸಮೀಪದ ಆಯನೂರು ಕೋಟೆಯಲ್ಲಿ ಸಿಡಿಲು ಬಡಿದು 18 ಕುರಿಗಳು ಮೃತಪಟ್ಟಿವೆ.

ಸಿಡಿಲು ಬಡಿದು ರೈತ ಸಾವು (ಕಲಬುರಗಿ ವರದಿ): ಜಿಲ್ಲೆಯ ಆಳಂದ ಹಾಗೂ ಅಫಜಲಪುರ ತಾಲ್ಲೂಕಿನ ವಿವಿಧೆಡೆ ಗುರುವಾರ ರಾತ್ರಿ ಮಳೆಯಾಗಿದ್ದು, ಸಿಡಿಲು ಬಡಿದು ಆಳಂದ ತಾಲ್ಲೂಕಿನ ಕವಲಗಾ ಗ್ರಾಮದ ರೈತ ಕಲ್ಯಾಣಿ ಹಣಮಂತ ಭೂಸನೂರು (60) ಮೃತಪಟ್ಟಿದ್ದಾರೆ. ಸಂಜೆ ಹೊಲಕ್ಕೆ ತೆರಳುವಾಗ ಗುಡುಗು, ಸಿಡಿಲು ಸಹಿತ ಮಳೆ ಆರಂಭಗೊಂಡಿದೆ. ಮಾರ್ಗ ಮಧ್ಯೆ ಮರದ ಕೆಳಗೆ ನಿಂತಾಗ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡತಕ್ಕೆ ರೈತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಕೊಡಗಿನಲ್ಲಿ ಜೋರು ಮಳೆ, ಸಂಭ್ರಮ

ನಾಪೋಕ್ಲು(ಕೊಡಗು ಜಿಲ್ಲೆ): ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ ಗುಡುಗಿನೊಂದಿಗೆ ಸುರಿದ ಜೋರು ಮಳೆಯಲ್ಲಿ ಜನ ಕುಣಿಯುತ್ತಾ ಸಂಭ್ರಮಿಸಿದರು.

ನಾಪೋಕ್ಲು ಸಮೀಪದ ಹೊದ್ದೂರು ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀಮಾರಿಯಮ್ಮ ಹಾಗೂ ಕೊರಗಜ್ಜದೇವರ ವಾರ್ಷಿಕ ಉತ್ಸವದಲ್ಲಿ ಭಗವತಿ ದೇವರಿಗೆ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿದ್ದರು. ಮಹಾಮಂಗಳಾರತಿ ನಡೆಯುವಾಗಲೇ ಮಳೆ ಸುರಿದಿದ್ದರಿಂದ ನೆನೆಯುತ್ತಾ ಕೊಡಗಿನ ವಾಲಗಕ್ಕೆ ಹೆಜ್ಜೆಹಾಕಿದರು.

ಪಟ್ಟಣ ಸೇರಿದಂತೆ ಕಕ್ಕಬ್ಬೆ, ಯವಕಪಾಡಿ, ನಾಲಡಿ, ನೆಲಜಿ, ಬಲ್ಲಮಾವಟಿ ಭಾಗಗಳಲ್ಲಿ ಸುಮಾರು 20 ನಿಮಿಷ ಉತ್ತಮ ಮಳೆಯಾಯಿತು. ಮೂರ್ನಾಡು ಸುತ್ತಮತ್ತಲ ಪ್ರದೇಶಗಳಲ್ಲೂ ವರ್ಷಧಾರೆಯಾಯಿತು.

‘ಯವಕಪಾಡಿಯ ಪನ್ನಂಗಾಲ ತಮ್ಮೆ ಹಬ್ಬದ ದಿನವೇ ಇಗ್ಗುತ್ತಪ್ಪ ದೇವರು ಭುವಿಗೆ ತಂಪೆರೆಯಿತು’ ಎಂದು ಗ್ರಾಮಸ್ಥರು ಸಂತಸದಿಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.