ADVERTISEMENT

ರಾಜ್ಯದ ವಿವಿಧೆಡೆ ಮುಂದುವರಿದ ಮಳೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 20:06 IST
Last Updated 2 ಡಿಸೆಂಬರ್ 2021, 20:06 IST
ಕುಮಟಾ ತಾಲ್ಲೂಕಿನ ಜ್ಯೇಷ್ಠಪುರದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಭತ್ತದ ಪೈರು ನೀರಿನಲ್ಲಿ ಮುಳುಗಿದೆ  –ಪ್ರಜಾವಾಣಿ ಚಿತ್ರ
ಕುಮಟಾ ತಾಲ್ಲೂಕಿನ ಜ್ಯೇಷ್ಠಪುರದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಭತ್ತದ ಪೈರು ನೀರಿನಲ್ಲಿ ಮುಳುಗಿದೆ  –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ, ಉತ್ತರ ಕನ್ನಡ, ಬೆಳಗಾವಿ,ಹಾವೇರಿ ಸೇರಿದಂತೆ ವಿವಿಧೆಡೆ ಮಳೆ ಮುಂದುವರಿದಿದೆ.

ಹುಬ್ಬಳ್ಳಿಯಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆಲವೆಡೆ ಬಿದ್ದ ಮರದ ಕೊಂಬೆಗಳನ್ನು ಮಹಾನಗರ ಪಾಲಿಕೆಯವರು ತೆರವುಗೊಳಿಸಿದರು.

ವರುಣನ ಕಣ್ಣಾಮುಚ್ಚಾಲೆ ಆಟದಿಂದಾಗಿ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಯಿತು. ಹತ್ತಿ, ಮೆಣಸಿನಕಾಯಿ ಕೊಯ್ಲು ಮಾಡಲು ಹೊಲಕ್ಕೆ ಹೋಗಿದ್ದವರಿಗೆ ಮಳೆ ಅಡ್ಡಿಪಡಿಸಿತು. ಧಾರವಾಡ ನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕೆಲ ಕಾಲ ಧಾರಾಕಾರ ಮಳೆಯಾಗಿದೆ. ನಗರದ ಬಿಆರ್‌ಟಿಎಸ್‌ ಸೇರಿದಂತೆ ಬಹಳಷ್ಟು ರಸ್ತೆಗಳು ಜಲಾವೃತಗೊಂಡವು.

ADVERTISEMENT

ಬೆಳಗಾವಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬುಧವಾರ ರಾತ್ರಿಯಿಡೀ ಜೋರು ಮಳೆ ಬಿದ್ದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಿದೆ. ಕಾರವಾರದಲ್ಲಿ ತಡರಾತ್ರಿ ಗುಡುಗು ಸಹಿತ ಜೋರಾಗಿ ವರ್ಷಧಾರೆ ಸುರಿಯಿತು. ಶಿರಸಿ, ಹಳಿಯಾಳ, ಭಟ್ಕಳ, ಗೋಕರ್ಣ, ಜೊಯಿಡಾದಲ್ಲೂ ರಾತ್ರಿಯಿಂದ ಬೆಳಗಿನ ತನಕ ಮಳೆಯಾಗಿದೆ. ಶಿರಸಿ ತಾಲ್ಲೂಕಿನಲ್ಲೇ ಸುಮಾರು 500 ಎಕರೆಗಳಷ್ಟು ಭತ್ತದ ಫಸಲಿಗೆ ಹಾನಿಯಾಗಿದೆ. ಕೊಯ್ಲು ಮಾಡಿಟ್ಟಿದ್ದ ಭತ್ತದ ತೆನೆಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ಹಳಿಯಾಳ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಮಳೆಯಲ್ಲಿ ನೆನೆದಿದೆ.

ಕೊಳ್ಳೇಗಾಲ ವರದಿ: ತಾಲ್ಲೂಕಿನ ಗುಂಡಾಲ್‌ ಜಲಾಶಯವು ಉದ್ಘಾಟನೆಗೊಂಡ 43 ವರ್ಷದಲ್ಲಿ ಮೊದಲ ಬಾರಿಗೆ ಭರ್ತಿಯಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಹರ್ಷ ವ್ಯಕ್ತ‍ಪಡಿಸಿದ್ದಾರೆ.

ಕೃಷಿಗೆ ನೀರುಣಿಸಲೆಂದೇ 1970ರಲ್ಲಿ ಜಲಾಶಯ ನಿರ್ಮಾಣಕ್ಕೆ ಭೂಮಿಪೂಜೆ ನಡೆದು, 1978ರಲ್ಲಿ ಉದ್ಘಾಟನೆಗೊಂಡಿತ್ತು. 0.97 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯದ ಜಲಾಶಯವು ಇದುವರೆಗೆ ಭರ್ತಿಯಾಗಿರಲಿಲ್ಲ. 2005 ಮತ್ತು 2015ರಲ್ಲಿ ಭರ್ತಿಯಾಗಲು ಒಂದು ಅಡಿ ಬಾಕಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.