ADVERTISEMENT

ಮುಂದುವರಿದ ಮಳೆಯ ಅಬ್ಬರ: ಜಲಾಶಯಗಳು ಭರ್ತಿ

​ಪ್ರಜಾವಾಣಿ ವಾರ್ತೆ
Published 20 ಮೇ 2022, 20:23 IST
Last Updated 20 ಮೇ 2022, 20:23 IST
ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಕನಕಪ್ಪನ ಗುಡ್ಡದ ಹಿರೇಹಳ್ಳದ ಬಳಿ ಹಲವು ವರ್ಷಗಳಿಂದ ವಾಸವಾಗಿದ್ದ 30 ಕುಟುಂಬಗಳ ಗುಡಿಸಲುಗಳು ಶುಕ್ರವಾರ ಬೆಳಿಗ್ಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಪ್ರವಾಹದಿಂದ ವಸತಿ ಕಳೆದುಕೊಂಡ ನಿರಾಶ್ರಿತರಿಗೆ ತಾಲ್ಲೂಕು ಆಡಳಿತ ಶಿರೂಳ ಗ್ರಾಮದಲ್ಲಿ ಪುನರ್ ವಸತಿ ಕಲ್ಪಿಸಿದೆ.-ಪ್ರಜಾವಾಣಿ ಚಿತ್ರ/ ಕಾಶೀನಾಥ ಬಿಳಿಮಗ್ಗದ
ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಕನಕಪ್ಪನ ಗುಡ್ಡದ ಹಿರೇಹಳ್ಳದ ಬಳಿ ಹಲವು ವರ್ಷಗಳಿಂದ ವಾಸವಾಗಿದ್ದ 30 ಕುಟುಂಬಗಳ ಗುಡಿಸಲುಗಳು ಶುಕ್ರವಾರ ಬೆಳಿಗ್ಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಪ್ರವಾಹದಿಂದ ವಸತಿ ಕಳೆದುಕೊಂಡ ನಿರಾಶ್ರಿತರಿಗೆ ತಾಲ್ಲೂಕು ಆಡಳಿತ ಶಿರೂಳ ಗ್ರಾಮದಲ್ಲಿ ಪುನರ್ ವಸತಿ ಕಲ್ಪಿಸಿದೆ.-ಪ್ರಜಾವಾಣಿ ಚಿತ್ರ/ ಕಾಶೀನಾಥ ಬಿಳಿಮಗ್ಗದ   

ಬೆಂಗಳೂರು: ಉತ್ತರ ಮತ್ತು ಮಧ್ಯ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಶುಕ್ರವಾರವೂ ವರುಣನ ಅಬ್ಬರ ಮುಂದುವರಿದಿದ್ದು, ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಸಂಕಷ್ಟ ಎದುರಿಸಿದ್ದಾರೆ. ಬೆಳೆ ಹಾನಿಯಿಂದ ರೈತರಿಗೆ ನಷ್ಟವಾಗಿದೆ.

ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜ್ಯದಲ್ಲಿ ಇಬ್ಬರು ಮೃತಪಟ್ಟಿ ದ್ದಾರೆ.ತೀರ್ಥಹಳ್ಳಿಯಲ್ಲಿ ಗದ್ದೆ ನೋಡಿಕೊಂಡು ಬರಲು ತೆರಳಿದ್ದ ಶಂಕರಪ್ಪ (52) ಎಂಬುವವರು ಕಾಲು ಜಾರಿ ಹಳ್ಳಕ್ಕೆ ಬಿದ್ದು ಅಸುನೀಗಿದ್ದಾರೆ.ಗದಗದ ಮುಂಡರಗಿ ತಾಲ್ಲೂಕಿನ ಯಕ್ಲಾಸಪುರ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟುವ ವೇಳೆ ಗ್ರಾಮದ ಯುವಕ ಟಿಪ್ಪುಸುಲ್ತಾನ್ (26) ಬೈಕ್‌ ಸಹಿತ ಕೊಚ್ಚಿಕೊಂಡು ಹೋಗಿದ್ದರು. ಶುಕ್ರವಾರ ಅವರ ಮೃತದೇಹ ಪತ್ತೆಯಾಗಿದೆ.

ಧಾರವಾಡ ಜಿಲ್ಲೆಯಲ್ಲಿ 97, ಗದಗದಲ್ಲಿ 119, ಶಿವಮೊಗ್ಗದಲ್ಲಿ 56, ವಿಜಯಪುರದಲ್ಲಿ 24, ಹಾವೇರಿ ಜಿಲ್ಲೆಯಲ್ಲಿ 87 ಮನೆಗಳು ಮಳೆಯಿಂದ ಹಾನಿಗೊಂಡಿವೆ.ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕನಕಪ್ಪನ ಗುಡ್ಡದ ಹಿರೇಹಳ್ಳದ ಬಳಿ ಹಲವು ವರ್ಷಗಳಿಂದ ವಾಸವಾಗಿದ್ದ 30 ಕುಟುಂಬಗಳ ಗುಡಿಸಲುಗಳು ಶುಕ್ರವಾರ ಬೆಳಿಗ್ಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.

ADVERTISEMENT

ಶಾಲೆಗಳಿಗೆ ರಜೆ: ಜೋರು ಮಳೆಯ ಕಾರಣ ಶಿವಮೊಗ್ಗ, ಹುಬ್ಬಳ್ಳಿ– ಧಾರವಾಡ, ಬಳ್ಳಾರಿ, ಗದಗ ಹಾವೇರಿ ಜಿಲ್ಲೆಗಳಲ್ಲಿಶುಕ್ರವಾರವೂ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹುಬ್ಬಳ್ಳಿ–ಧಾರವಾಡ, ಹಾವೇರಿಯಲ್ಲಿ ಶನಿವಾರವೂ ರಜೆ ಘೋಷಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸರಾಸರಿ 10 ಸೆ.ಮೀ ಮಳೆಯಾಗಿದೆ. ಘಟಪ್ರಭಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು ಮೂಡಲಗಿ- ಸುಣದೋಳಿಗೆ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಮಲಪ್ರಭಾ ಜಲಾಶಯಕ್ಕೆ 946 ಕ್ಯುಸೆಕ್‌ ಒಳಹರಿವು ಆರಂಭವಾಗಿದೆ.

ಶಿವಮೊಗ್ಗದ ಗಾಜನೂರು ತುಂಗಾ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಬಾರಿ ಏರಿಕೆ ಕಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತುಂಗಾ ಜಲಾಶಯದ ಎರಡು ಗೇಟುಗಳನ್ನು ತೆರೆದು ನದಿಗೆ 12 ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಗಿದೆ.

ದಾವಣಗೆರೆ ಜಿಲ್ಲೆಯ ಸೂಳೆಕೆರೆ ಹಳ್ಳ ಭರ್ತಿಯಾಗಿ ಎರಡು ದಂಡೆ ಒಂದಾಗಿ ಪ್ರವಾಹ ಬಂದಿದೆ. ಹರಿಹರದಲ್ಲಿ ತುಂಗಭದ್ರಾ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಜಗಳೂರು ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದಾಗಿ ತುಪ್ಪದಹಳ್ಳಿ ಕೆರೆ 5 ದಶಕಗಳ ನಂತರ ಭರ್ತಿಯಾಗಿ ಕೋಡಿ ಬಿದ್ದಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಗಚಿ ಜಲಾಶಯ ಭರ್ತಿಯಾಗಿದ್ದು, ಐದು ಕ್ರಸ್ಟ್‌ ಗೇಟ್‌ಗಳ ಮೂಲಕ 500 ಕ್ಯುಸೆಕ್‌ ನೀರನ್ನು ಶುಕ್ರವಾರ ನದಿಗೆ ಬಿಡಲಾಯಿತು. ರಾಯಚೂರು ಜಿಲ್ಲೆಯ ಮಸ್ಕಿ ಜಲಾಶಯ ಭರ್ತಿಯಾಗಿದ್ದು, 500 ಕ್ಯುಸೆಕ್ ನೀರನ್ನು ಹಿರೇಹಳ್ಳಕ್ಕೆ ಬಿಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.