ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಹವಾಮಾನ ಇಲಾಖೆ ಪ್ರಕಾರ ರಾಜ್ಯದಲ್ಲಿ ಮೇ ತಿಂಗಳು ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಒಂದೇ ತಿಂಗಳು ಸರಾಸರಿ 24.5 ಸೆಂ.ಮೀ. ಮಳೆ ಸುರಿದಿದೆ. 1901ರಿಂದ ಈವರೆಗೆ ಮೇ ತಿಂಗಳಲ್ಲಿ ಸುರಿದ ಗರಿಷ್ಠ ಮಳೆ ಪ್ರಮಾಣ ಇದಾಗಿದೆ.
1943ರಲ್ಲಿ ಮೇ ತಿಂಗಳು ಸರಾಸರಿ 18.5 ಸೆಂ.ಮೀ. ಮಳೆಯಾಗಿತ್ತು. ಬಳಿಕ ಇದಕ್ಕಿಂತ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿರಲಿಲ್ಲ. ಈ ಬಾರಿ ಪೂರ್ವ ಮುಂಗಾರು ಚುರುಕುಗೊಂಡ ಪರಿಣಾಮ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ. ಕರಾವಳಿಯಲ್ಲಿ ಗರಿಷ್ಠ ಮಳೆಯಾಗಿದ್ದು, ಮೇ ತಿಂಗಳ ಸರಾಸರಿ ಮಳೆ 76.4 ಸೆಂ.ಮೀ.ಗೆ ತಲುಪಿದೆ. 1918ರಲ್ಲಿ 69 ಸೆಂ.ಮೀ. ಮಳೆಯಾಗಿತ್ತು.
ಮಾರ್ಚ್‌ನಿಂದ ಮೇ ಅವಧಿಗೆ ಹೋಲಿಸಿದರೂ ಈ ಬಾರಿ ದಾಖಲೆ ಮಳೆ ಸುರಿದಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಸರಾಸರಿ 32.2 ಸೆಂ.ಮೀ. ಮಳೆಯಾಗಿದೆ. 2022ರಲ್ಲಿ ಮಾರ್ಚ್–ಮೇ ಅವಧಿಯಲ್ಲಿ 25.5 ಸೆಂ.ಮೀ. ಮಳೆ ಸುರಿದಿತ್ತು. ಕರಾವಳಿಯಲ್ಲಿ ಈ ಬಾರಿ ಮೂರು ತಿಂಗಳಲ್ಲಿ ಸರಾಸರಿ 83.5 ಸೆಂ.ಮೀ. ಮಳೆಯಾಗಿದೆ. ಈ ಭಾಗದಲ್ಲಿ 1918ರಲ್ಲಿ 70.6 ಸೆಂ.ಮೀ. ಮಳೆಯಾಗಿತ್ತು. ಉತ್ತರ ಒಳನಾಡಿನಲ್ಲಿಯೂ ಮೂರು ತಿಂಗಳು ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, 23.1 ಸೆಂ.ಮೀ. ಮಳೆಯಾಗಿದೆ. 1943ರಲ್ಲಿ 18.9 ಸೆಂ.ಮೀ. ಮಳೆಯಾಗಿತ್ತು.
ಬೆಂಗಳೂರು ನಗರದಲ್ಲಿ ಮೇ ಒಂದೇ ತಿಂಗಳು 31.5 ಸೆಂ.ಮೀ. ಮಳೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. 2023ರಲ್ಲಿ 30.5 ಸೆಂ.ಮೀ. ಮಳೆಯಾಗಿತ್ತು.
ಮಳೆ ಮುಂದುವರಿಕೆ: ಕರಾವಳಿ–ಮಲೆನಾಡಿನ ಕೆಲವೆಡೆ ಸೋಮವಾರದಿಂದ ಮೂರು ದಿನಗಳು ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರದಂದು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಿದರೆ, ಮಂಗಳವಾರ ಹಾಗೂ ಬುಧವಾರ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಈ ಜಿಲ್ಲೆಗಳ ಒಂದೆರಡು ಕಡೆ ಮೂರು ದಿನಗಳು ನಿರಂತರ ಗಾಳಿಯೊಂದಿಗೆ ಭಾರಿ ಮಳೆ ಸುರಿಯುವ ಸಂಭವವಿದೆ. ಜೂನ್ 4ರಿಂದ ಈ ಭಾಗದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ ಒಂದೆರಡು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ. ಮಂಗಳವಾರದಿಂದ ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲೆಯ ಒಂದೆರಡು ಕಡೆ ಸಾಧಾರಣ ಮಳೆ ಹೊರತುಪಡಿಸಿದರೆ ಉಳಿದೆಡೆ ಒಣಹವೆ ಇರಲಿದೆ ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.