ADVERTISEMENT

ಅತಿವೃಷ್ಟಿ: ಹೆಚ್ಚಿನ ಪರಿಹಾರ ಕೋರಲು ಮುಂದಿನ ವಾರ ದೆಹಲಿಗೆ –ಬಿ.ಎಸ್. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 6:32 IST
Last Updated 25 ಆಗಸ್ಟ್ 2020, 6:32 IST
ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.
ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.   

ಬೆಳಗಾವಿ: ಶೀಘ್ರ ಎಲ್ಲ ಶಾಸಕರ ಸಭೆ ಕರೆದು, ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಸಮರ್ಪಕ ಪರಿಹಾರ ನೀಡಲು ಯೋಜನೆ ರೂಪಿಸಲಾಗುವುದು. ಎಲ್ಲ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುವುದು. ಮುಂದಿನ ವಾರ‌ ದೆಹಲಿಗೆ ಹೋಗಿ ಹೆಚ್ಚಿನ ಪರಿಹಾರ ಬಿಡುಗಡೆಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಅತಿವೃಷ್ಟಿಗೆ ಸಂಬಂಧಿಸಿದಂತೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಕೋವಿಡ್-19 ಇರುವುದರಿಂದ ಎನ್‌ಡಿ‌ಆರ್‌ಎಫ್ಅನುದಾನದಡಿ ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.

ADVERTISEMENT

ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರ್ಕಾರಕ್ಕೆ ಕಳಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಪ್ರವಾಹ ನಿರ್ವಹಣೆ ಮತ್ತಿತರ ತುರ್ತು ಕೆಲಸಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ₹ 412 ಕೋಟಿ ರೂಪಾಯಿ ಅನುದಾನ ಲಭ್ಯವಿದೆ. ಹೆಚ್ಚಿನ ಹಣ ಬೇಕಾದರೆ ತಕ್ಷಣವೇ ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ ₹ 174 ಕೋಟಿ ಇದೆ. ಇದಲ್ಲದೇ ಉಳಿದಿರುವ ಅನುದಾನದಲ್ಲಿ ರಸ್ತೆ ದುರಸ್ತಿ ಮತ್ತಿತರ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಇದೇ ರೀತಿ ಇತರೆ ಜಿಲ್ಲೆಗಳಲ್ಲಿ ಸಾಕಷ್ಟು ಹಣ ಲಭ್ಯವಿದೆ. ಮನೆ ಕಳೆದುಕೊಂಡಿರುವ ಬೆಳಗಾವಿಯ 44156 ಫಲಾನುಭವಿಗಳಿಗೆ 488 ಕೋಟಿ ಪರಿಹಾರ ಬಿಡುಗಡೆ ಆಗಿದೆ. ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರ್ಕಾರಕ್ಕೆ ಕಳಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ಬೆಳಗಾವಿ ಹಾಗೂ ಧಾರವಾಡ ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಕೋವಿಡ್ ರಾಜ್ಯದ ಆರ್ಥಿಕ ಪರಿಸ್ಥಿತಿ ಆಧರಿಸಿ ಮನೆ ಹಾಗೂ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪ್ರವಾಹ ಸ್ಥಿತಿಗತಿಯ ಬಗ್ಗೆ ಮಾತನಾಡಿದರು.

‘ಕಂದಾಯ ಸಚಿವ ಆರ್. ಅಶೋಕ, ಕಳೆದ ವರ್ಷದ ಮನೆಪರಿಹಾರ ನೀಡುವ ತಂತ್ರಾಂಶ ಪುನಃ ಆರಂಭಿಸುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್, ಅವರು ಪ್ರವಾಹ‌ ನಿರ್ವಹಣೆ ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿದರು.

ವಿಧಾನಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಜಿಲ್ಲೆಯ ಇನ್ನೂ 9 ಸಾವಿರ ಮನೆಗಳನ್ನು ಪರಿಹಾರದ ಪಟ್ಟಿಗೆ ಸೇರ್ಪಡೆ ಮಾಡಿ ವಿವಿಧ ಕಂತುಗಳ ಬಿಡುಗಡೆ ಮಾಡಬೇಕು ಎಂದು ಕೋರಿದರು.

ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ, ಬೆಳೆ ವಿಮೆಯಲ್ಲಿ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ನಡುವೆ ಪ್ರತಿ ವರ್ಷ ವ್ಯತ್ಯಾಸ ಕಂಡುಬರುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಕೋರಿದರು.

ಶಾಸಕ ಮಹಾದೇವಪ್ಪ ಯಾದವಾಡ, ಕಳೆದ ಬಾರಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ₹ 320 ಕೋಟಿ ರಸ್ತೆ ಅಭಿವೃದ್ಧಿಗೆ ಅಗತ್ಯವಿದೆ. ಕಳೆದ ವರ್ಷ ಹಾನಿಗೊಳಗಾದ ಮನೆಗಳ ಮರು ಸಮೀಕ್ಷೆ ನಡೆಸಿ ಲಾಗಿನ್ ಆಗಲು ಅನುಕೂಲ ಕಲ್ಪಿಸಬೇಕು.
ನಗರೋತ್ಥಾನ ಯೋಜನೆ ಅನುದಾನ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕ ಮಹೇಶ್ ಕುಮಠಳ್ಳಿ, ಅಥಣಿ ಮತಕ್ಷೇತ್ರದಲ್ಲಿ ಬೆಳೆಹಾನಿ ಮತ್ತು ಮನೆ ಪರಿಹಾರ ಇನ್ನೂ ಪಾವತಿಸುವುದು ಬಾಕಿ ಇದೆ. ರಸ್ತೆಗಳು ಹಾಳಾಗಿರುವುದರಿಂದ ತುರ್ತಾಗಿ ₹ 50-60 ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕೆರೆಗಳು ಹಾಗೂ ಬಾಂದಾರಗಳು ಒಡೆದಿರುವುದರಿಂದ ಬೆಳೆ ಕೂಡ ಹಾನಿಯಾಗಿದೆ. ಆದ್ದರಿಂದ ಇವುಗಳ ಶಾಶ್ವತ ದುರಸ್ತಿಗೆ ಮತ್ತು ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.

ಧಾರವಾಡ ಜಿಲ್ಲೆಯ ಶಾಸಕ ಅರವಿಂದ ಬೆಲ್ಲದ, ‘ಮಳೆಯ ಪ್ರಮಾಣ ತಿಳಿಯಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದೆ’ ಎಂದರು. ಹುಬ್ಬಳ್ಳಿ-ಧಾರವಾಡ ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹಿಸಿದರು.

ಶಾಸಕ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಅಮೃತ ದೇಸಾಯಿ, ಪ್ರತಿ ಮಳೆಗಾಲದಲ್ಲಿ ಬೆಣ್ಣಿಹಳ್ಳದಿಂದ ಉದ್ಭವಿಸುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮನವಿ ಮಾಡಿದರು.

ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡರ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಸ್ಥಿತಿ ಮತ್ತು ನಿರ್ವಹಣೆಯ ಸ್ಥಿತಿಗತಿಗಳನ್ನು ವಿವರಿಸಿದರು.

ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಅತ್ಯಂತ ಮುತುವರ್ಜಿಯಿಂದ ಮಹಾರಾಷ್ಟ್ರ ಸರ್ಕಾರದ ಜತೆ ಸಮನ್ವಯ ಸಾಧಿಸಿದ್ದರಿಂದ ಪ್ರವಾಹ ನಿರ್ವಹಣೆ ಸಾಧ್ಯವಾಯಿತು. ಪ್ರವಾಹ ನಿರ್ವಹಣೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಮ್ಮ ಅಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳ ಜತೆ ಸತತ ಸಂಪರ್ಕದಲ್ಲಿ ಇದ್ದ ಪರಿಣಾಮ ಯಾವುದೇ ತೊಂದರೆಯಾಗಿಲ್ಲ ಎಂದು ವಿವರಿಸಿದರು. ಜಿಲ್ಲೆಯಲ್ಲಿ ಬಿತ್ತನೆಬೀಜ, ರಸಗೊಬ್ಬರ ಸಮರ್ಪಕವಾಗಿ ವಿತರಿಸಲಾಗಿದ್ದು, ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದರು.

ಧಾರವಾಡ ಜಿಲ್ಲೆಯ ಮಾಹಿತಿಯನ್ನು ಅಲ್ಲಿನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನೀಡಿದರು.

ಕೈಮಗ್ಗ ಮತ್ತು ಜವಳಿ ಸಚಿವ ಶ್ರೀಮಂತ ಪಾಟೀಲ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಪಿ.ರಾಜೀವ, ದುರ್ಯೋಧನ ಐಹೊಳೆ, ಉಮೇಶ್ ಕತ್ತಿ, ಮಹಾಂತೇಶ ಕೌಜಲಗಿ, ಅನಿಲ್ ಬೆನಕೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಎಲ್. ಅತೀಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.