ADVERTISEMENT

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಪೊಲೀಸರಿಂದ ದೌರ್ಜನ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 13:08 IST
Last Updated 12 ಫೆಬ್ರುವರಿ 2020, 13:08 IST
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ   

ಬೆಂಗಳೂರು: ಹೈಕೋರ್ಟ್ ಪಾರ್ಕಿಂಗ್‌ ಸ್ಥಳದಲ್ಲಿ ಪೊಲೀಸರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.

ಪೊಲೀಸರಿಂದಾದ ದೌರ್ಜನ್ಯದ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆರಸನ್ನುಉಲ್ಲೇಖಿಸಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ರೆಡ್ಡಿ, ಪೊಲೀಸರ ವಿರುದ್ಧ ಬ್ರಷ್ಟಾಚಾರದ ಆರೋಪವನ್ನೂಮಾಡಿದ್ದಾರೆ.

*

ADVERTISEMENT

‘‘ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರೇ, ಹೈಕೋರ್ಟ್ ಪಾರ್ಕಿಂಗ್‌ ಸ್ಥಳದಲ್ಲಿ ನಮ್ಮ ಪಕ್ಷದ ಕಾರ್ಯದರ್ಶಿ ಜೊತೆಗೆ ಹೋಗುತ್ತಿದ್ದಾಗ, ನನ್ನನ್ನು ಅರ್ಧ ಕಿ.ಮೀ. ದೂರದಿಂದಲೇ ಪೊಲೀಸರು ಫಾಲೋ ಮಾಡಿದ್ದಾರೆ. ಬಳಿಕ ನನ್ನ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಜೀಪಿಗೆ ತಳ್ಳಿದ್ದಾರೆ. ಇದನ್ನು ಪ್ರಶ್ನಿಸಿದ ನಮ್ಮ ಕಾರ್ಯದರ್ಶಿ ಮತ್ತು ಈ ಘಟನೆಯನ್ನು ವಿಡಿಯೊ ಮಾಡುತ್ತಿದ್ದ ಯುವತಿಯನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ಕೃತ್ಯಕ್ಕೆ ಪೊಲೀಸರಿಗೆ ಅನುಮತಿ ಕೊಟ್ಟ ನೀವು ಅಂತಿಮವಾಗಿ ಸಾಧಿಸಿದ ಘನಕಾರ್ಯವೇನು?

ಅಮಾಯಕರನ್ನು ವಂಚಿಸಿದ ಫ್ರಾಡ್‌ಗಳಿಂದ ಕೋಟ್ಯಂತರ ಹಣ ಮತ್ತು ಚಿನ್ನ ಕದ್ದು, ಲಂಚ ಪಡೆದ ಆರೋಪ ಇರುವ, ಈಗ ಸಿಬಿಐ ತನಿಖೆಗೆ ಒಳಪಟ್ಟಿರುವ ಪೊಲೀಸ್ ಅಧಿಕಾರಿಗಳು ನಿಮ್ಮ ಅಧೀನದಲ್ಲಿದ್ದಾರೆ. ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪ ಹೊತ್ತವರು ಕೂಡ ಇರಬಾರದ ಸ್ಥಳಗಳಲ್ಲಿ ಇದ್ದಾರೆ. ಆಯಕಟ್ಟಿನ ಸ್ಥಳಕ್ಕಾಗಿ ಅಧಿಕಾರಸ್ಥರಿಗೆ ಮತ್ತು ಕಾಂಗ್ರೆಸ್ ಪಕ್ಷದ ಪವರ್ ಬ್ರೋಕರ್ಸ್‌ಗೆ ಕರೆ ಮಾಡಿದ ಆರೋಪ ನಿಮ್ಮ ಮೇಲೆಯೇ ಇದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ನಿಮ್ಮ ಇಲಾಖೆಯ ಕೆಲವರು ಮಾಡುವ ನಾಚಿಕೆಗೇಡಿನ ಕೃತ್ಯಗಳು ಅವಮಾನಕಾರಿ. ಇಲಾಖೆಗೆ ಗೌರವ ಮತ್ತು ಘನತೆ ಬರುವುದು ಖಾಕಿ ಬಟ್ಟೆಯಿಂದಲ್ಲ. ಕರ್ತವ್ಯನಿಷ್ಠೆ, ದಕ್ಷತೆ, ಪ್ರಾಮಾಣಿಕತೆ ಮತ್ತು ನೈತಿಕ ನಡವಳಿಕೆಗಳಿಂದ. ಆದರೆ, ಈ ವಿಚಾರಗಳು ನಿಮಗೆ ಅರ್ಥವಾಗುತ್ತಿಲ್ಲ ಎನ್ನುವುದೇ ದೊಡ್ಡ ದುರಂತ. ನಿಮ್ಮ ಇಲಾಖೆಯ ಕೆಲವರು ಮಾಡುವ ಕಾನೂನುಬಾಹಿರ ಕೆಲಸಗಳಿಗೆ, ನಿನ್ನೆ ನಮ್ಮ ಮೇಲಿನ ದೌರ್ಜನ್ಯಕ್ಕೆ ಇಂದು ನ್ಯಾಯ ಸಿಗುವುದಿಲ್ಲ ಎಂದು ತಿಳಿದಿದೆ. ಆದರೆ ಪ್ರತಿ ನಾಳೆಯೂ ನಿನ್ನೆಯ ಹಾಗಿರುವುದಿಲ್ಲ.

ನನ್ನ ಸ್ಥೈರ್ಯ ಮತ್ತು ಸಂಕಲ್ಪ ಬಲವನ್ನು ನೀವು ಮುರಿಯಲಾರಿರಿ. ನಾನು ಗಾಂಧೀಜಿ ಪರಂಪರೆಯವನು.’’ಎಂದು ಬರೆದುಕೊಂಡಿದ್ದಾರೆ. ಇದರೊಟ್ಟಿಗೆಕೆಲವು ವಿಡಿಯೊಗಳನ್ನೂ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.