ADVERTISEMENT

Covid-19 Karnataka Update: ರಾಜ್ಯದಲ್ಲಿ ಇಂದು 15,785 ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 18:07 IST
Last Updated 19 ಏಪ್ರಿಲ್ 2021, 18:07 IST
   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಜೊತೆಗೆ ಸೋಂಕಿನ ತೀವ್ರತೆ ಯಿಂದ ಅಸ್ವಸ್ಥಗೊಳ್ಳುವವರ ಸಂಖ್ಯೆ ಕೂಡ ಏರಿಕೆ ಕಾಣುತ್ತಿದೆ. ಸೋಮವಾರ ಬೆಂಗಳೂರಿನಲ್ಲಿ 97 ಮಂದಿ ಸೇರಿದಂತೆ ರಾಜ್ಯದಲ್ಲಿ 146 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ.

ಕಳೆದ ವರ್ಷ ಅಕ್ಟೋಬರ್ ಬಳಿಕ ಕೋವಿಡ್‌ನಿಂದ ಮೃತಪಡುವವರ ಸಂಖ್ಯೆ ಇಳಿಮುಖ ಪಡೆದಿತ್ತು. ಈ ವರ್ಷ ಮಾರ್ಚ್‌ ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೂ ಮರಣ ಪ್ರಕರಣಗಳು ಬಹುತೇಕ ದಿನ ಒಂದಂಕಿಯಲ್ಲಿಯೇ ಇದ್ದವು. ಆದರೆ, ಈಗ ಆ ಸಂಖ್ಯೆ 150ರ ಗಡಿ ಸಮೀಪಿಸಿದ್ದು, ಮರಣ ಪ್ರಮಾಣ ದರ ಶೇ 0.92ಕ್ಕೆ ಏರಿಕೆಯಾಗಿದೆ. ಒಂದು ದಿನದ ಅವಧಿಯಲ್ಲಿ 101 ಮಂದಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದಾರೆ. ಇದರಿಂದಾಗಿ ಐಸಿಯು
ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 721ಕ್ಕೆ ತಲುಪಿದೆ. ಪರಿಣಾಮ ಬೆಂಗಳೂರು ಸೇರಿದಂತೆ ಕೆಲವವೆಡೆ ಐಸಿಯು ಹಾಸಿಗೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ 166 ಮಂದಿ ಐಸಿಯುನಲ್ಲಿದ್ದಾರೆ.

ಸೋಂಕಿತರಲ್ಲಿ ಹಾಸನದಲ್ಲಿ ಹನ್ನೊಂದು ಮಂದಿ, ಮೈಸೂರಿನಲ್ಲಿ ಎಂಟು ಮಂದಿ, ಬೆಂಗಳೂರು ಗ್ರಾಮಾಂತರ ಹಾಗೂ ಕಲಬುರ್ಗಿಯಲ್ಲಿ ತಲಾ ಆರು ಮಂದಿ, ಧಾರವಾಡದಲ್ಲಿ ಮೂವರು, ಯಾದಗಿರಿ, ಚಿಕ್ಕಬಳ್ಳಾಪುರ ಹಾಗೂ ಬೀದರ್‌ನಲ್ಲಿ ತಲಾ ಇಬ್ಬರು, ಬಳ್ಳಾರಿ, ಬೆಳಗಾವಿ, ಹಾವೇರಿ, ಕೊಡಗು, ಕೋಲಾರ, ರಾಮನಗರ, ತುಮಕೂರು, ಉತ್ತರ ಕನ್ನಡ ಹಾಗೂ ವಿಜಯಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ‌ಇವರಲ್ಲಿ 26 ಮಂದಿ 50 ವರ್ಷದೊಳಗಿನವರಾಗಿದ್ದಾರೆ. ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 13,497ಕ್ಕೆ ಏರಿಕೆಯಾಗಿದೆ.

ADVERTISEMENT

23 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮೂರಂಕಿ ತಲುಪಿದೆ. ‌ಸೋಂಕು ದೃಢ ಪ್ರಮಾಣ ಶೇ 12.81ರಷ್ಟಿದೆ. ಬೆಂಗಳೂರಿನಲ್ಲಿ 9,618 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ತುಮಕೂರು (652), ಮೈಸೂರು (568), ಕಲಬುರ್ಗಿ (513), ಹಾಸನ (320), ಬೀದರ್ (318), ವಿಜಯಪುರ (302) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಸೋಂಕಿತರಾದವರ ಸಂಖ್ಯೆ 11.76 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.