
ಬೆಂಗಳೂರು: ‘ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಮತ್ತು ಅದರ ಮೇಲ್ಮನವಿ ಪ್ರಾಧಿಕಾರ ಹೊರಡಿಸಿರುವ ಆದೇಶಗಳನ್ನು ಸಿವಿಲ್ ನ್ಯಾಯಾಲಯಗಳಲ್ಲಿ, ಅನುಷ್ಠಾನ ಕೋರಿಕೆ ಅರ್ಜಿ (ಎಕ್ಸಿಕ್ಯೂಷನ್ ಪಿಟಿಷನ್) ಸಲ್ಲಿಸುವ ಮೂಲಕ ಜಾರಿಗೆ ತರಲು ಆಗದು’ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಿವಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ‘ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್’ ಸಲ್ಲಿಸಿದ್ದ ಮೂರು ರಿಟ್ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ರಿಯಲ್ ಎಸ್ಟೇಟ್ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ರೇರಾ ಆದೇಶಗಳು ನಾಗರಿಕ ಸಂಹಿತೆ ಪ್ರಕ್ರಿಯೆಯಲ್ಲಿನ (ಸಿಪಿಸಿ) ‘ಡಿಕ್ರಿ’ ಅರ್ಥದ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂಬ ವಿಶೇಷ ಉಲ್ಲೇಖವನ್ನು ನಮೂದಿಸಿದೆ.
‘ಕಲಂ 40(1)ರ ಅಡಿ ರೇರಾ ವಿಧಿಸುವ ಪರಿಹಾರದ ಮೊತ್ತ ಅಥವಾ ದಂಡವನ್ನು ಬಡ್ಡಿ ಸಹಿತ ವಸೂಲು ಮಾಡಬಹುದು. ಅದನ್ನು ಭೂ ಕಂದಾಯ ಎಂದು ಪರಿಗಣಿಸಬಹುದು ಎಂದು ತಿಳಿಸಲಾಗಿದೆ. ಅಂತೆಯೇ, ಕಲಂ 79ರ ಅಡಿ ರೇರಾದ ಆದೇಶ ಮತ್ತು ದಾವೆಗಳನ್ನು ಪುರಸ್ಕರಿಸಲು ಸಿವಿಲ್ ಕೋರ್ಟ್‌ಗೆ ನಿರ್ಬಂಧವಿದೆ’ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಬಿಲ್ಡರ್‌ಗಳ ಮನವಿ ತಿರಸ್ಕರಿಸಿದ್ದ ಸಿವಿಲ್ ಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಪೀಠ, ‘ಪ್ರತಿವಾದಿ ರೇರಾ ಕಂದಾಯ ಅಧಿಕಾರಿಗಳ ಮೂಲಕ ಆದೇಶ ಜಾರಿಗೆ ಇತರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಸ್ವತಂತ್ರವಾಗಿದೆ’ ಎಂದು ಸ್ಪಷ್ಟಪಡಿಸಿದೆ.
ಪ್ರಕರಣವೇನು?: ಮನೆ ಖರೀದಿದಾರರ ಪರ ‘ಕೆ-ರೇರಾ’ 2023ರಲ್ಲಿ ಹಲವು ಆದೇಶಗಳನ್ನು ನೀಡಿತ್ತು. ಈ ಆದೇಶಗಳನ್ನು ಜಾರಿಗೊಳಿಸುವಂತೆ ಕೋರಿ ಮನೆ ಖರೀದಿದಾರರು ಸಿವಿಲ್ ಕೋರ್ಟ್‌ನಲ್ಲಿ ಆದೇಶಗಳ ಅನುಷ್ಠಾನ ಕೋರಿಕೆ ಅರ್ಜಿಗಳನ್ನು (ಎಕ್ಸಿಕ್ಯೂಷನ್ ಪಿಟಿಷನ್) ಸಲ್ಲಿಸಿದ್ದರು.
ಈ ಅರ್ಜಿಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಬಿಲ್ಡರ್‌ಗಳು, ‘ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ಅದರ ಮೇಲ್ಮನವಿ ಪ್ರಾಧಿಕಾರ ಹೊರಡಿಸಿರುವ ಆದೇಶಗಳನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗದು. ಸಿವಿಲ್ ಕೋರ್ಟ್‌ಗಳಿಗೆ ಕಲಂ 79ರ ಅಡಿ ಅಂತಹ ಅರ್ಜಿಗಳನ್ನು ಪುರಸ್ಕರಿಸುವ ಅಧಿಕಾರವಿಲ್ಲ. ಕರ್ನಾಟಕ ರೇರಾ ನಿಯಮ 26ರ ಅಡಿ ಹೇಗೆ ಆದೇಶಗಳನ್ನು ಜಾರಿಗೊಳಿಸಬಹುದು ಎಂಬುದು ಈಗಾಗಲೇ ವಿದಿತವಾಗಿದೆ’ ಎಂಬ ವಾದ ಮಂಡಿಸಿದ್ದರು.
ಇದಕ್ಕೆ ಪ್ರತಿಯಾಗಿ ಮನೆ ಖರೀದಿದಾರರು, ‘ರೇರಾ ಆದೇಶಗಳು ಡಿಕ್ರಿ ಇದ್ದಂತೆ. ಹಾಗಾಗಿ, ಎಕ್ಸಿಕ್ಯೂಷನ್ ಅರ್ಜಿಗಳು ಸ್ವೀಕಾರಾರ್ಹ ಮತ್ತು ಸಿವಿಲ್ ಕೋರ್ಟ್‌ಗಳು ಅವುಗಳನ್ನು ಜಾರಿಗೊಳಿಸುವ ಅಧಿಕಾರ ಹೊಂದಿವೆ’ ಎಂದು ಪ್ರತಿವಾದ ಮಂಡಿಸಿದ್ದರು.
ರೇರಾ ಆದೇಶಗಳು ಕಾನೂನು ವಿಶ್ಲೇಷಣಾ ವ್ಯಾಪ್ತಿಗೆ ಒಳಪಡುವುದಿಲ್ಲ. ರೇರಾ ಆದೇಶಗಳನ್ನು ಜಾರಿಗೊಳಿಸಲು ತಹಶೀಲ್ದಾರ್ ಸಂಪೂರ್ಣ ವಿಫಲವಾದಾಗ ಮಾತ್ರ ಸಕ್ಷಮ ಕೋರ್ಟ್ ಮೊರೆ ಹೋಗಬಹುದು.–ನ್ಯಾ.ಎಂ.ನಾಗಪ್ರಸನ್ನ
ಡಿಕ್ರಿ ವ್ಯಾಖ್ಯಾನ
ಸಿವಿಲ್ ಪ್ರೊಸೀಜರ್ ಕೋಡ್ (ಸಿಪಿಸಿ) ಕಲಂ 2(2)ರಲ್ಲಿ ಡಿಕ್ರಿ ಎಂದು ವ್ಯಾಖ್ಯಾನಿಸಲು ಮೂರು ಅಗತ್ಯ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.
* ತೀರ್ಪು ಮೂಲ ದಾವೆಯಿಂದ ಬಂದಿರಬೇಕು
* ವ್ಯಾಜ್ಯ ದೂರಿನೊಂದಿಗೆ ಆರಂಭವಾಗಿರಬೇಕು ಮತ್ತು ಡಿಕ್ರಿಯೊಂದಿಗೆ ಕೊನೆಯಾಗಬೇಕು
* ನ್ಯಾಯಾಲಯ ತೀರ್ಪನ್ನು ಅಂತಿಮಗೊಳಿಸಿರಬೇಕು
* ರೇರಾ ಮುಂದಿರುವ ಪ್ರಕ್ರಿಯೆಗಳು ದೂರುಗಳಷ್ಟೇ. ಅವು ಮೂಲ ದಾವೆಗಳಲ್ಲ. ಹಾಗಾಗಿ ಅವುಗಳನ್ನು ದಾವೆಗಳೆಂದು ಪರಿಗಣಿಸಲಾಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.